ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆ ಕಂಪನಿ (ಎಚ್‌ಡಿಬಿಆರ್‌ಟಿಎಸ್)ಯಿಂದ ನಿರ್ಮಾಣ ಮತ್ತು ನಿರ್ವಹಣೆ ಆಗುತ್ತಿರುವ ‘ಚಿಗರಿ ಬಸ್’ ಮಾರ್ಗ ಮತ್ತು ನಿಲ್ದಾಣಗಳು ಕಳಾಹೀನವಾಗುತ್ತಿವೆ!
2020ರ ಫೆಬ್ರುವರಿಯಿಂದ ಅಧಿಕೃತವಾಗಿ ಚಿಗರಿ ಬಸ್ ಕಾರ್ಯಾಚರಣೆ ಆರಂಭವಾಗಿದ್ದು, ಐದೂವರೆ ವರ್ಷದಲ್ಲಿ ನಿರ್ವಹಣೆಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣ ಆವರಣದಲ್ಲಿರುವ ಬಿಆರ್‌ಟಿಎಸ್ ನಿಲ್ದಾಣ (ಟರ್ಮಿನಲ್) ಅವ್ಯವಸ್ಥೆಯ ಆಗರವಾಗಿದೆ. ನಿಲ್ದಾಣದ ಸುತ್ತ ಭಾರಿ ಪ್ರಮಾಣದ ಗುಂಡಿಗಳು ನಿರ್ಮಾಣವಾಗಿದ್ದು, ದೂಳು ಹೊಮ್ಮಿಸುತ್ತಿವೆ. ರೈಲ್ವೆ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಚಿಗರಿ ಬಸ್‌ಗಳ ಓಲಾಟ ಹೆಚ್ಚಾಗುತ್ತದೆ. ರಸ್ತೆ ದುಃಸ್ಥಿತಿ ಹಾಗೂ ನಿಲ್ದಾಣದ ಅವ್ಯವಸ್ಥೆಗೆ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಹುಬ್ಬಳ್ಳಿ ರೈಲ್ವೆನಿಲ್ದಾಣದಿಂದ ಧಾರವಾಡ ಕೇಂದ್ರ ಬಸ್ ನಿಲ್ದಾಣದವರೆಗೂ 22.5 ಕಿ.ಮೀ. ಅಂತರದಲ್ಲಿ ಒಟ್ಟು 34 ಬಿಆರ್‌ಟಿಎಸ್ ನಿಲ್ದಾಣಗಳಿವೆ. ಸತ್ತೂರು ನಿಲ್ದಾಣದವರೆಗೂ ಹುಬ್ಬಳ್ಳಿ ವ್ಯಾಪ್ತಿಯಲ್ಲಿ 23 ನಿಲ್ದಾಣಗಳಿದ್ದು, ಶುಚಿತ್ವದ ವಿಷಯದಲ್ಲಿ ಪ್ರತಿ ನಿಲ್ದಾಣದಲ್ಲಿ ಅವ್ಯವಸ್ಥೆಯೇ ಕಂಡುಬರುತ್ತದೆ.
ನಿಲ್ದಾಣಕ್ಕೆ ಹೊಂದಿಕೊಂಡು ಮತ್ತು ರಸ್ತೆ ಅಂಚಿನಲ್ಲಿ ಮಣ್ಣಿನ ಗುಡ್ಡೆಗಳು ಬಿದ್ದಿವೆ. ಈ ಗುಡ್ಡೆಗಳ ಮೇಲೆ ಕಸ ಸಂಗ್ರಹವಾಗಿದೆ. ನಿಲ್ದಾಣ ಪ್ರವೇಶಿಸುವ ಪ್ರಯಾಣಿಕರನ್ನು ಅವ್ಯವಸ್ಥೆಗಳೇ ಮೊದಲು ಸ್ವಾಗತಿಸುತ್ತವೆ. ಈ ಸಮಸ್ಯೆ ಎಲ್ಲ ನಿಲ್ದಾಣಗಳಲ್ಲೂ ಇದೆ.
ಕಿತ್ತುಹೋದ ಫಲಕಗಳು: ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ನಿಲ್ದಾಣದ ಫಲಕ ಕಿತ್ತುಹೋಗಿದೆ. ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಮತ್ತು ಶಾಂತಿನಿಕೇತನ ನಿಲ್ದಾಣಗಳಿಗೆ ನಾಮಫಲಕಗಳನ್ನು ಅಳವಡಿಸಲಾಗಿದ್ದು, ಅದರಲ್ಲಿನ ಅಕ್ಷರಗಳು ಕಿತ್ತುಹೋಗಿವೆ. ಬಿಆರ್‌ಟಿಎಸ್ ನಿಲ್ದಾಣದಲ್ಲಿ ರಸ್ತೆಗೆ ಮುಖಮಾಡಿ ಅಳವಡಿಸಿದ್ದ ಯಾವ ಫಲಕಗಳೂ ಸಮರ್ಪಕವಾಗಿಲ್ಲ. ನವನಗರ ನಿಲ್ದಾಣ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ಫಲಕಗಳು ಕಿತ್ತುಬಿದ್ದಿವೆ. ಅವುಗಳನ್ನು ತೆರವುಗೊಳಿಸಿಲ್ಲ; ದುರಸ್ತಿಯನ್ನೂ ಮಾಡಿಲ್ಲ.
ನಿಲ್ದಾಣದಲ್ಲಿ ಕಿತ್ತುಹೋದ ‘ಪೇವರ್’ ಹಾಗೇ ಬಿದ್ದಿವೆ. ಕೆಲವು ಕಡೆ ಸಿಮೆಂಟ್ ಇಟ್ಟಿಗೆಗಳು ಕೂಡಾ ಕುಸಿದಿವೆ. ಹುಬ್ಬಳ್ಳಿ ನಗರದಿಂದ ಉಣಕಲ್‌ವರೆಗೂ ಟರ್ಮಿನಲ್ ಇರುವ ಕಡೆ ಬಿಆರ್‌ಟಿಎಸ್ ಮಾರ್ಗದ ವಿಭಜಕಗಳಲ್ಲಿ ಗಿಡಗಳು ಬೆಳೆದಿವೆ. ಎಪಿಎಂಸಿಯಿಂದ ಸತ್ತೂರವರೆಗೂ ರಸ್ತೆ ವಿಭಜಕಗಳಲ್ಲಿ ವೈವಿಧ್ಯಮಯ ಗಿಡಗಳನ್ನು ಬೆಳೆಸಲಾಗಿದ್ದು, ಮಾರ್ಗವು ಅಂದವಾಗಿ ಕಾಣುತ್ತದೆ. ಆದರೆ, ಈ ಗಿಡಗಳ ಬುಡದಲ್ಲಿ ಕಸ ಇದ್ದು, ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ಅಗತ್ಯವಿದೆ.
ಬಿಆರ್‌ಟಿಎಸ್ ಟರ್ಮಿನಲ್‌ಗಳಲ್ಲಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿದ್ದೇವೆ. ಟರ್ಮಿನಲ್ ನಿರ್ಮಾಣದಲ್ಲಿ ಉಂಟಾದ ಸಮಸ್ಯೆ ಪರಿಶೀಲಿಸಿ ಮುಂದಿನ ಕ್ರಮ ವಹಿಸಲಾಗುವುದುಸಾವಿತ್ರಿ ಬಿ.ಕಡಿ ಹು–ಧಾ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ
ಖಾಸಗಿ ಏಜೆನ್ಸಿಗೆ ಗುತ್ತಿಗೆ
ಹುಬ್ಬಳ್ಳಿ–ಧಾರವಾಡ ಬಿಆರ್‌ಟಿಎಸ್ ಮಾರ್ಗದ ಅಕ್ಕಪಕ್ಕದಲ್ಲಿ ಬೆಳೆಯುವ ಗಿಡಗಳನ್ನು ಕಾಲಕಾಲಕ್ಕೆ ಕತ್ತರಿಸಿ ನಿರ್ವಹಣೆ ಮಾಡಲು ಖಾಸಗಿ ಏಜೆನ್ಸಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಏಜೆನ್ಸಿ ಸಿಬ್ಬಂದಿ ಈಗಾಗಲೇ ಕೆಲವು ಭಾಗದಲ್ಲಿ ಗಿಡ ಕತ್ತರಿಸುವ ಕಾರ್ಯ ಆರಂಭಿಸಿದ್ದಾರೆ. ನಿಲ್ದಾಣಗಳಲ್ಲಿ ಶುಚಿತ್ವ ಕಾಪಾಡುವುದು ಮತ್ತು ನಿರ್ವಹಣೆ ಮಾಡುವುದಕ್ಕೆ ಯಾವುದೇ ಕಂಪನಿಗೆ ಜವಾಬ್ದಾರಿ ವಹಿಸಿಲ್ಲ. ‘ಖಾಸಗಿ ಏಜೆನ್ಸಿಯವರು ಒಂದು ಕಡೆಯಿಂದ ಗಿಡ ಕತ್ತರಿಸುವ ಕೆಲಸ ಮುಗಿಸುವ ಹೊತ್ತಿಗೆ ಇನ್ನೊಂದು ಕಡೆ ಬೆಳೆಯುತ್ತದೆ. ಸಾರ್ವಜನಿಕ ರಸ್ತೆ ಮತ್ತು ಬಿಆರ್‌ಟಿಎಸ್ ಮಾರ್ಗ ಮಧ್ಯೆ ಮಣ್ಣಿನ ಗುಡ್ಡೆಗಳಿರುವುದು ಗಮನಕ್ಕೆ ಬಂದಿದೆ. ನಿಲ್ದಾಣಗಳಲ್ಲಿ ಫಲಕಗಳು ಮತ್ತು ಪೇವರ್‌ಗಳು ಕಿತ್ತು ಹೋಗಿರುವುದನ್ನು ಕೂಡಲೇ ಪರಿಶೀಲಿಸಲಾಗುವುದು. ಇವುಗಳ ದುರಸ್ತಿಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹು–ಧಾ ಬಿಆರ್‌ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಬಿ.ಕಡಿ ‘ಪ್ರಜಾವಾಣಿ‘ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.