ADVERTISEMENT

ಒಳಗೆ ಗುದ್ದಾಟ; ಹೊರಗೆ ಸಮರ್ಥನೆ

ಸಿದ್ದರಾಮಯ್ಯ ವಿರುದ್ಧ ಸಚಿವ ಜಗದೀಶ ಶೆಟ್ಟರ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2019, 13:30 IST
Last Updated 2 ಸೆಪ್ಟೆಂಬರ್ 2019, 13:30 IST
   

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಜೊತೆ ಆಂತರಿಕವಾಗಿ ಗುದ್ದಾಡುತ್ತಾರೆ. ಹೊರಗಡೆ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು ‘ಶಿವಕುಮಾರ್‌ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದ ವಿಚಾರವನ್ನು ಸಿದ್ದರಾಮಯ್ಯ ರಾಜಕೀಯ ಉದ್ದೇಶದಿಂದ ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ಸೇಡಿನ ರಾಜಕಾರಣ ಮಾಡಿಲ್ಲ.ತಪ್ಪು ಮಾಡಿಲ್ಲವೆಂದರೆ ಶಿವಕುಮಾರ್‌ ಇಡಿ ವಿಚಾರಣೆ ಎದುರಿಸಲಿ ಬಿಡಿ; ವಿಚಾರಣೆಯೂ ಮಾಡಬಾರದು ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

‘ಸಿದ್ದರಾಮಯ್ಯ ಯಾವ ಊರಿಗೆ ಹೋದರೂ ನಮ್ಮ ಸರ್ಕಾರವನ್ನು ಟೀಕೆ ಮಾಡುತ್ತಲೇ ಇರುತ್ತಾರೆ. ಇದಕ್ಕೂ ಮೊದಲು ಅವರು ಕಾಂಗ್ರೆಸ್‌ನಲ್ಲಿ ತಮ್ಮ ಸ್ಥಾನ ಏನೆಂಬುದನ್ನು ತಿಳಿದುಕೊಳ್ಳಲಿ.ಶಾಸಕಾಂಗ ಪಕ್ಷದ ನಾಯಕರಾಗಿರುವ ಅವರಿಗೆ ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನು ಮಾಡುತ್ತಾರೆ ಎಂಬುದೇ ಗೊತ್ತಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಕಾಂಗ್ರೆಸ್‌ನ ಕೇಂದ್ರ ನಾಯಕರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಲೇವಡಿ ಮಾಡಿದರು.

ADVERTISEMENT

ಜಿಂದಾಲ್‌ಗೆ ಭೂಮಿ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶೆಟ್ಟರ್‌ ‘ಹಿಂದಿನ ಸರ್ಕಾರ ಏನೇನು ರಾಮಾಯಣ ಮಾಡಿದೆ ಎಂಬುದನ್ನು ನೋಡಬೇಕು. ಸಂಪುಟ ಉಪಸಮಿತಿ ವರದಿ ನೀಡಿದೆಯೋ; ಇಲ್ಲವೋ ಎನ್ನುವುದನ್ನು ಪರಿಶೀಲಿಸಬೇಕು.ಕಡತವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.