ಹುಬ್ಬಳ್ಳಿ: ‘ಹತ್ತು ವರ್ಷದ ಮಗನಿಂದ ದೂರವಿದ್ದು ಎರಡು ತಿಂಗಳಾಯಿತು. ಅಮ್ಮನನ್ನು ನೋಡಬೇಕಿದೆ ಎಂದು ಎದೆಯೊಡೆದಿದ್ದಾನೆ. ನಿತ್ಯ ಅಳುತ್ತಿದ್ದಾನೆ. ನನ್ನ ಮಗನನ್ನು ನೋಡಬೇಕಿದೆ. ಊರಿಗೆ ಕಳುಹಿಸಿಕೊಡಿ...’
ಹೀಗೆ ಅಳುತ್ತಲೇ ಮನವಿ ಮಾಡಿಕೊಂಡಿದ್ದು ಯಾದಗಿರಿ ಸಮೀಪದ ಆನೂರು ಬಿ ಗ್ರಾಮದ ಮಹಿಳೆ ಸಾವಿತ್ರಿ ಅಂಬಿಗೇರ. ನಗರದ ಹೊಸ ಬಸ್ ನಿಲ್ದಾಣದಲ್ಲಿ ಯಾದಗಿರಿ ಬಸ್‌ಗಾಗಿ ಕಾಯುತ್ತಿದ್ದ ಅವರು ಬೆಳಿಗ್ಗೆ 6 ಗಂಟೆಗೆ ನಿಲ್ದಾಣಕ್ಕೆ ಬಂದಿದ್ದರು.
30 ಪ್ರಯಾಣಿಕರು ಭರ್ತಿಯಾಗುವ ತನಕ ಬಸ್ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಕಾಯುತ್ತಿದ್ದೇನೆ. ಬಸ್ ನಿಲ್ದಾಣದಲ್ಲಿ ನೀರು ಕೂಡ ಸಿಗುತ್ತಿಲ್ಲ ಎಂದು ಸಾವಿತ್ರಿ ಬೇಸರ ವ್ಯಕ್ತಪಡಿಸಿದರು.
30 ಜನ ಆದರಷ್ಟೇ ಬಸ್ ಬಿಡುತ್ತಾರಂತೆ. ಇಲ್ಲವಾದರೆ ವಾಪಸ್ ಮನೆಗೆ ಹೋಗಬೇಕು. ಹೀಗಾದರೆ ನಾವು ಊರು ಸೇರುವುದು ಯಾವಾಗ? ಮಗನನ್ನು ನೋಡುವುದು ಯಾವಾಗ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದಿಂದ ಬೆಂಗಳೂರು, ಶಿವಮೊಗ್ಗ, ಹಾವೇರಿ ಕಡೆಗೆ ಮಂಗಳವಾರ ಮುಂಜಾನೆಬಸ್‌ಗಳು ಹೊರಟವು. ಪ್ರಯಾಣಿಕರು ಅಂತರ ಕಾಯ್ದುಕೊಳ್ಳದೆ ಬಸ್ ಯಾವಾಗ ಬರುತ್ತದೆ ಎಂದು ವಿಚಾರಿಸಲು ಮುಗಿಬಿದ್ದರು. ಅಂತರ ಕಾಯ್ದುಕೊಳ್ಳಲು ಚೌಕಗಳನ್ನು ಹಾಕಿದ್ದರೂ, ಚೌಕದಲ್ಲಿ ಯಾರೂ ನಿಂತಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.