
ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಬ್ಯಾಡಗಿ ರೈಲು ನಿಲ್ದಾಣದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಒದಗಿಸಬೇಕು ಎಂದು ಒತ್ತಾಯಿಸಿ ಬ್ಯಾಡಗಿ ವರ್ತಕರ ಪರವಾಗಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ನಗರದಲ್ಲಿರುವ ನೈರುತ್ಯ ರೈಲ್ವೆ ಪ್ರಧಾನ ಕಚೇರಿ ರೈಲ್ ಸೌಧದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅವರಿಗೆ ಮನವಿ ಸಲ್ಲಿಸಲಾಯಿತು.
‘ಬ್ಯಾಡಗಿ ಪ್ರದೇಶವು ಪ್ರಸಿದ್ಧ ಕೆಂಪು ಮೆಣಸಿನ ಮಾರುಕಟ್ಟೆಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯಾಗಿದ್ದು, ವರ್ಷಕ್ಕೆ ಸುಮಾರು ₹2,000 ಕೋಟಿ ವ್ಯಾಪಾರ ನಡೆಯುತ್ತಿದೆ. ರಾಜ್ಯದ ಹೊರಗಿನ ರೈತರು ಹಾಗೂ ವ್ಯಾಪಾರಸ್ಥರು ಇಲ್ಲಿಗೆ ರೈಲಿನಲ್ಲಿ ಆಗಮಿಸುತ್ತಾರೆ. ಆದರೆ, ಪ್ರಸ್ತುತ ಯಾವುದೇ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳು ಬ್ಯಾಡಗಿ ರೈಲು ನಿಲ್ದಾಣದಲ್ಲಿ ನಿಲ್ಲದ ಕಾರಣ, ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.
‘ವ್ಯಾಪಾರಸ್ಥರ ಹಾಗೂ ಸ್ಥಳೀಯರ ಅನುಕೂಲಕ್ಕಾಗಿ ಯಶವಂತಪುರ– ವಾಸ್ಕೊ–ಡಿ– ಗಾಮಾ ಎಕ್ಸ್‌ಪ್ರೆಸ್ ರೈಲು, ಕುರ್ಲಾ ಎಕ್ಸ್‌ಪ್ರೆಸ್ ರೈಲುಗಳನ್ನು ಬ್ಯಾಡಗಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು’ ಎಂದು ಮನವಿ ಮಾಡಿದರು.
ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ, ಡಿಆರ್‌ಯುಸಿಸಿ ಸದಸ್ಯ ಮಾಲತೇಶ ಅರಳಿಮಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.