ADVERTISEMENT

ಬೈಪಾಸ್‌ ಹೆದ್ದಾರಿ ಕುಸಿತ: ಆತಂಕ

ನಿರ್ಮಾಣ ಹಂತದಲ್ಲಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ

ನಾಗರಾಜ್ ಬಿ.ಎನ್‌.
Published 14 ಜೂನ್ 2025, 19:29 IST
Last Updated 14 ಜೂನ್ 2025, 19:29 IST
ಹುಬ್ಬಳ್ಳಿ–ಧಾರವಾಡ ಮಧ್ಯೆ ಮೈಕ್ರೋಫಿನಿಷ್‌ ಕಂಪನಿ ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ–ಧಾರವಾಡ ಮಧ್ಯೆ ಮೈಕ್ರೋಫಿನಿಷ್‌ ಕಂಪನಿ ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ನಿರ್ಮಾಣ ಹಂತದಲ್ಲಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (ಬೈಪಾಸ್‌) ಅಲ್ಲಲ್ಲಿ ಕುಸಿದಿದ್ದು, ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಮುನ್ಸೂಚನೆ ನೀಡುವಂತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಡಿ ₹2,400 ಕೋಟಿ ವೆಚ್ಚದಲ್ಲಿ 6 ಪಥದ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಹುಬ್ಬಳ್ಳಿ ಗಬ್ಬೂರು ವೃತ್ತದಿಂದ ಧಾರವಾಡದ ನರೇಂದ್ರದವರೆಗೆ 32 ಕಿ.ಮೀ. ರಸ್ತೆ ವಿಸ್ತರಿಸಲಾಗುತ್ತಿದೆ.

ಜೆಸಿಬಿ ಮತ್ತು ಬೃಹತ್‌ ಯಂತ್ರಗಳಿಂದ ಕಾಮಗಾರಿ ನಡೆದಿದ್ದು, ಕೆಲವೆಡೆ ಗುಡ್ಡ ಕೊರೆಯಲಾಗಿದೆ. ಎರಡು ಸರ್ವಿಸ್‌ ರಸ್ತೆ ಹೊರತುಪಡಿಸಿ, ಆರು ಪಥ ಹೆದ್ದಾರಿ ನಿರ್ಮಾಣಕ್ಕೆ ಕೆಲವೆಡೆ ಕನಿಷ್ಠ 10 ರಿಂದ 20 ಅಡಿ ಆಳ ಮಣ್ಣು ತೆಗೆಯಲಾಗಿದೆ. ಇಟಗಟ್ಟಿ ಗ್ರಾಮ ಮತ್ತು ಮೈಕ್ರೋಫಿನಿಷ್‌ ಕಂಪನಿ ಬಳಿ ನಿರ್ಮಾಣ ಹಂತದ ರಸ್ತೆ ಕುಸಿದಿದೆ. ರಾಶಿಗಟ್ಟಲೇ ಮಣ್ಣು, ಪಕ್ಕದ ನಿರ್ಮಾಣ ಹಂತದ ಸರ್ವಿಸ್‌ ರಸ್ತೆ ಮೇಲೆ ಬಿದ್ದಿದೆ.

ADVERTISEMENT

ಅಪಾಯದ ಹಿನ್ನೆಲೆಯಲ್ಲಿ ರಸ್ತೆ ಕುಸಿದ ಸ್ಥಳದ ಹೆದ್ದಾರಿಯ ಎರಡೂ ಕಡೆ, ಎಚ್ಚರಿಕೆ ಸಂದೇಶ ನೀಡಿ, ಬ್ಯಾರಿಕೇಡ್‌ ಹಾಕಲಾಗಿದೆ. ಕುಸಿತದ ಸ್ಥಳ ಸರಿಪಡಿಸಲು ಜೆಸಿಬಿಯಿಂದ ಹೆಚ್ಚುವರಿಯಾಗಿ ಮಣ್ಣು ಕೊರೆದು, ಕಾಮಗಾರಿ ನಡೆಸುವ ಸಿದ್ಧತೆ ನಡೆದಿದೆ. ಅಲ್ಲದೆ, ನಿರ್ಮಾಣ ಹಂತದಲ್ಲಿರುವ ಹೆದ್ದಾರಿಯ ಕೆಲವು ಕಡೆ ಬಿರುಕು ಸಹ ಬಿಟ್ಟಿದೆ. ಇದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.

‘ಕಾಮಗಾರಿ ಪ್ರಗತಿಯಲ್ಲಿ ಇರುವ ಕಾರಣ, ರಸ್ತೆ ತೀರಾ ಇಕ್ಕಟ್ಟಾಗಿದೆ. ಇದೇ ರಸ್ತೆಯಲ್ಲಿ ವಾಹನಗಳ ದ್ವಿಮುಖ ಸಂಚಾರ ನಡೆಯುತ್ತಿದ್ದು, ಸಾಕಷ್ಟು ಅಪಘಾತ ಸಂಭವಿಸಿವೆ. ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ, ಮಣ್ಣು ತೆಗೆದು ಹಾಗೆಯೇ ಬಿಡಲಾಗಿದೆ. ಏರು–ಇಳಿತವಿರುವ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ಸಂಚಾರ ಅಪಾಯಕಾರಿ ಆಗಿದೆ. ಹೀಗಿದ್ದಾಗ, ರಸ್ತೆ ಕುಸಿದಿರುವುದು ಅಪಘಾತಕ್ಕೆ ಮತ್ತಷ್ಟು ಕಾರಣವಾಗುವುದಲ್ಲದೆ, ಭವಿಷ್ಯದ ಪ್ರಶ್ನೆಯೂ ಎದುರಾಗಿದೆ’ ಎಂದು ಬೆಳಗಾವಿಯ ಕಾರು ಚಾಲಕ ಸಲೀಮ್ ಅಹ್ಮದ್‌ ರಾಜಾವಾಲೆ ಹೇಳಿದರು.

‘ಜೆಸಿಬಿಯಿಂದ ಹೆದ್ದಾರಿ ಸಮತಟ್ಟು ಮಾಡಿ ಸರ್ವಿಸ್‌ ರಸ್ತೆ ಕಾಮಗಾರಿ ನಡೆಸುವಾಗ, ನಿರ್ಮಾಣ ಹಂತದ ಹೆದ್ದಾರಿ ಕುಸಿದಿದೆ. ಇತ್ತೀಚಿಗೆ ಸುರಿದ ಮಳೆಯಿಂದ ಕೆಲ ಕಡೆ ಹೆದ್ದಾರಿ ಪಕ್ಕದ ಮಣ್ಣು ಕುಸಿದಿದೆ. ಸರಿಪಡಿಸುವ ಕಾರ್ಯ ನಡೆದಿದೆ’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಮಧ್ಯೆ ಇಟಗಟ್ಟಿ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹೆದ್ದಾರಿ ನಿರ್ಮಾಣ ಮಾಡುವಾಗ ಕೆಲ ಕಡೆ ಸ್ವಲ್ಪ ಮಣ್ಣು ಕುಸಿದಿರಬಹುದು. ಆ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು
–ಭುವನೇಶ್ವರಕುಮಾರ ಯೋಜನಾ ನಿರ್ದೇಶಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುಬ್ಬಳ್ಳಿ
ಹೆದ್ದಾರಿ ಮಣ್ಣು ಕುಸಿತದ ಬಗ್ಗೆ ಮಾಹಿತಿ ಇಲ್ಲ. ಯಾವಾಗ ಎಲ್ಲೆಲ್ಲಿ ಕುಸಿದಿದೆ ಅದಕ್ಕೆ ಕಾರಣವೇನು ಎಂಬ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮಾಹಿತಿ ಪಡೆಯಲಾಗುವುದು.
ದಿವ್ಯಪ್ರಭು ಜಿಲ್ಲಾಧಿಕಾರಿ

ಸೆಪ್ಟೆಂಬರ್‌ವರೆಗೆ ಗಡುವು

ಬೈಪಾಸ್‌ ರಸ್ತೆ ಕಾಮಗಾರಿ ಗುತ್ತಿಗೆಯನ್ನು ಇಪಿಸಿ (ಎಂಜಿನಿಯರಿಂಗ್‌ ಪ್ರೊಕ್ಯೂರ್‌ಮೆಂಟ್‌ ಆ್ಯಂಡ್‌ ಕನ್‌ಸ್ಟ್ರಕ್ಸನ್‌) ಮಾದರಿಯಲ್ಲಿ ಟೆಂಡರ್‌ ನೀಡಲಾಗಿದೆ. 2023ರಲ್ಲಿ ಕಾಮಗಾರಿ ಆರಂಭವಾಗಿದ್ದು ಇದೇ ವರ್ಷ ಸೆಪ್ಟೆಂಬರ್‌ಗೆ ಪೂರ್ಣಗೊಳ್ಳಬೇಕು. ನಂತರ ಐದು ವರ್ಷ ಗುತ್ತಿಗೆದಾರರೇ ನಿರ್ವಹಿಸಬೇಕು ಎಂಬ ಷರತ್ತು ಇದೆ. 20 ಕಡೆ ಜನರು ಸುಲಭವಾಗಿ  ಓಡಾಡಲು ಹೈಲೈಟೆಡ್‌ ರಸ್ತೆ 21 ಕೆಳ ಸೇತುವೆ ಎರಡು ರೈಲ್ವೆ ಮೇಲ್ಸೇತುವೆ ಬೃಹತ್‌ ವಾಹನಗಳಿಗೆ 13 ಕಡೆ ಕೆಳಸೇತುವೆ ಲಘು ವಾಹನಗಳಿಗೆ ಏಳು ಕಡೆ ಕೆಳಸೇತುವೆ ಹಾಗೂ ಎರಡು ರೈಲ್ವೆ ಮೇಲ್ಸೇತುವೆ ಸಹ ನಿರ್ಮಾಣವಾಗಲಿದೆ.

14 ವರ್ಷಗಳಲ್ಲಿ 450ಕ್ಕೂ ಹೆಚ್ಚು ಬಲಿ

ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಈ ಬೈಪಾಸ್‌ ರಸ್ತೆಯಲ್ಲಿ 14 ವರ್ಷಗಳಲ್ಲಿ ಬರೋಬ್ಬರಿ 450ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 2009ರಿಂದ ಈವರೆಗೆ 1900ಕ್ಕೂ ಹೆಚ್ಚು ಅಪಘಾತ ಸಂಭವಿಸಿವೆ. 390 ಗಂಭೀರ ಸ್ವರೂಪ ಮತ್ತು 900ಕ್ಕೂ ಹೆಚ್ಚು ಸಾಧಾರಣ ಅಪಘಾತ ಘಟಿಸಿವೆ. 2 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.