ADVERTISEMENT

ಫ್ರಾಂಚೈಸ್ ಆಧಾರಿತ ಟೂರ್ನಿಗೆ ಅನುಮತಿ ರದ್ದು

ಬೆಳಗಾವಿ, ಹುಬ್ಬಳ್ಳಿ ಕ್ರೀಡಾಂಗಣಗಳನ್ನು ಪರಿಶೀಲಿಸಿದ ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 18:55 IST
Last Updated 28 ನವೆಂಬರ್ 2019, 18:55 IST
ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ಗುರುವಾರ ಹುಬ್ಬಳ್ಳಿಯ ಕ್ರೀಡಾಂಗಣದಲ್ಲಿ ಕ್ಲಬ್‌ ಹೌಸ್‌ ಕಾಮಗಾರಿ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ
ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ಗುರುವಾರ ಹುಬ್ಬಳ್ಳಿಯ ಕ್ರೀಡಾಂಗಣದಲ್ಲಿ ಕ್ಲಬ್‌ ಹೌಸ್‌ ಕಾಮಗಾರಿ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಕ್ರಿಕೆಟ್‌ ಟೂರ್ನಿ ಮ್ಯಾಚ್‌ ಫಿಕ್ಸಿಂಗ್‌ ಕುರಿತ ತನಿಖೆ ಪೂರ್ಣಗೊಳ್ಳುವ ತನಕ ರಾಜ್ಯದಲ್ಲಿ ಫ್ರಾಂಚೈಸ್‌ ಆಧಾರಿತ ಯಾವುದೇ ಟೂರ್ನಿಗಳಿಗೂ ಅನುಮತಿ ಕೊಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಸಂತೋಷ ಮೆನನ್‌ ಹೇಳಿದರು.

ಗುರುವಾರ ಇಲ್ಲಿನ ಕೆ.ಎಸ್‌.ಸಿ.ಎ ಕ್ರೀಡಾಂಗಣಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರ ಜೊತೆ ಮಾತನಾಡಿ ‘ರಾಜ್ಯದಲ್ಲಿ ಮೊದಲು ಕ್ರಿಕೆಟ್‌ ಸ್ವಚ್ಛಗೊಳಿಸಬೇಕಾಗಿದೆ. ಆದ್ದರಿಂದ ಫ್ರಾಂಚೈಸ್‌ ಆಧಾರಿತ ಹಾಗೂ ವಾಹಿನಿಯಲ್ಲಿ ನೇರ ಪ್ರಸಾರವಾಗುವ ಟೂರ್ನಿಗಳಿಗೆ ಅನುಮತಿ ನೀಡುವುದಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಅನುಮತಿ ನೀಡುವ ಬಗ್ಗೆ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಲಿದೆ’ ಎಂದರು.

ಕೆಪಿಎಲ್‌ ಟೂರ್ನಿಯನ್ನು ಮತ್ತೆ ಆರಂಭಿಸಲಾಗುವುದೇ ಎನ್ನುವ ಪ್ರಶ್ನೆಗೆ ‘ಈಗ ನಡೆಯುತ್ತಿರುವ ತನಿಖೆ ಮುಗಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ತನಿಖೆ ಮುಗಿಯುವ ತನಕವಂತೂ ಟೂರ್ನಿ ಆರಂಭಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್‌ (ಎಚ್‌ಪಿಎಲ್‌) ಹಾಗೂ ಜೂನಿಯರ್ ಎಚ್‌ಪಿಎಲ್‌ ಟೂರ್ನಿಗಳನ್ನು ನಡೆಸುತ್ತಿತ್ತು. ಕುಂದಾನಗರಿಯಲ್ಲಿ ಬೆಳಗಾವಿ ಪ್ರೀಮಿಯರ್‌ ಲೀಗ್‌ ಮತ್ತು ಮಂಗಳೂರಿನಲ್ಲಿ ಮಂಗಳೂರು ಪ್ರೀಮಿಯರ್‌ ಲೀಗ್‌ ಟೂರ್ನಿಗಳು ನಡೆಯುತ್ತಿದ್ದವು. ಈ ಟೂರ್ನಿಗಳಿಗೆ ತಾತ್ಕಾಲಿಕವಾಗಿ ಈಗ ಅನುಮತಿ ರದ್ದು ಮಾಡಲಾಗಿದೆ.

ಮೂರು ತಿಂಗಳ ಗಡುವು:

ಹುಬ್ಬಳ್ಳಿಯಲ್ಲಿ ನಿರ್ಮಿಸಲಾಗುತ್ತಿರುವ ಕ್ಲಬ್‌ ಹೌಸ್‌ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಮೆನನ್‌ ಅವರು ಗುತ್ತಿಗೆದಾರರಿಗೆ ಸೂಚಿಸಿದರು. ಇದಕ್ಕೂ ಮೊದಲು ಅವರು ಬೆಳಗಾವಿಯಲ್ಲಿ ಕ್ರೀಡಾಂಗಣ ಪರಿಶೀಲಿಸಿದರು.

2016ರಲ್ಲಿ ಆರಂಭವಾಗಿದ್ದ ಕ್ಲಬ್‌ ಹೌಸ್ ನಿರ್ಮಾಣ ಕಾರ್ಯ 15 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಮೂರು ವರ್ಷ ಕಳೆದರೂ ಇನ್ನೂ ಮುಗಿದಿಲ್ಲ.

ಈ ಕುರಿತು ಕೇಳಲಾದ ಪ್ರಶ್ನೆಗೆ ‘ಸುಪ್ರೀಂ ಕೋರ್ಟ್‌ ನೇಮಿಸಿದ್ದ ಲೋದಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕಿದ್ದ ಕಾರಣ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನು ಮುಂದೆ ಎಲ್ಲ ಕೆಲಸಗಳು ವೇಗವಾಗಿ ಪೂರ್ಣಗೊಳ್ಳುತ್ತವೆ’ ಎಂದರು.

‘ಕಾರವಾರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂ ದಾಖಲೆ ಪಡೆಯುವ ಕಾರ್ಯ ಪ್ರಗತಿಯಲ್ಲಿದ್ದು, ಅಲ್ಲಿಯೂ ಕ್ರೀಡಾಂಗಣ ನಿರ್ಮಾಣವಾಗಲಿದೆ. ಗದುಗಿನಲ್ಲಿ ಸಿದ್ಧಗೊಂಡಿರುವ ಕ್ರೀಡಾಂಗಣದಲ್ಲಿ ಆದಷ್ಟು ಬೇಗನೆ ಪಂದ್ಯಗಳನ್ನು ಆಯೋಜಿಸಲಾಗುವುದು. ಹುಬ್ಬಳ್ಳಿಯಲ್ಲಿ ಕ್ಲಬ್‌ ಹೌಸ್‌ ನಿರ್ಮಾಣ ಮುಗಿದ ಬಳಿಕ ಅಭ್ಯಾಸಕ್ಕಾಗಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಹೇಳಿಕೆಗಾಗಿ ಮಾತ್ರ ಮಿಥುನ್‌ಗೆ ನೋಟಿಸ್

ಬೆಂಗಳೂರು: ಕರ್ನಾಟಕ ತಂಡದ ಮಧ್ಯಮವೇಗಿ ಅಭಿಮನ್ಯು ಮಿಥುನ್ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆದರೆ ಅವರ ಮೇಲೆ ಯಾವುದೇ ಆರೋಪ ಇಲ್ಲ. ಎರಡು ವರ್ಷಗಳ ಹಿಂದೆ ಕೆಪಿಎಲ್ ಟೂರ್ನಿಯಲ್ಲಿ ನಡೆದಿದ್ದ ಘಟನೆಯೊಂದರ ಕುರಿತು ಮಾಹಿತಿ ಪಡೆಯಲು ಕರೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೂಲಗಳು ಸ್ಪಷ್ಟಪಡಿಸಿವೆ.

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ನಡೆದಿದೆಯೆನ್ನಲಾದ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯು ಮಿಥುನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಸಲದ ಟೂರ್ನಿಯಲ್ಲಿ ಅವರು ಶಿವಮೊಗ್ಗಲಯನ್ಸ್ ತಂಡದಲ್ಲಿ ಆಡಿದ್ದರು. ಈ ಕುರಿತು ‘‍‍ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಿಥುನ್ ಅವರ ಆಪ್ತ ಮೂಲಗಳು 2017ರ ಕೆಪಿಎಲ್‌ನಲ್ಲಿ ನಡೆದ ಘಟನೆಯ ಕುರಿತು ಹೇಳಿವೆ. ‘ಆ ವರ್ಷ ಮಿಥುನ್ ಅವರು ಬಿಜಾಪುರ ಬುಲ್ಸ್‌ ತಂಡದಲ್ಲಿ ಆಡಿದ್ದರು. ಆಗ ಹುಬ್ಬಳ್ಳಿಯಲ್ಲಿ ನಡೆದಿದ್ದ ಬೆಳಗಾವಿ ಪ್ಯಾಂಥರ್ಸ್ ತಂಡದ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಆ ತಂಡದ ಮಾಲೀಕ ಅಲಿ ಅಶ್ಫಾಕ್ ಮತ್ತು ಇನ್ನೊಬ್ಬ ಅಧಿಕಾರಿಯ ವಿರುದ್ಧ ಮಿಥುನ್ ಮೈದಾನದಲ್ಲಿಯೇ ಸಿಟ್ಟು ತೋರಿಸಿದ್ದರು. ಆ ಕುರಿತು ಸಾಕ್ಷಿ ಹೇಳಿಕೆ ದಾಖಲಿಸಿಕೊಳ್ಳಲು ಮಿಥುನ್‌ ಅವರನ್ನು ಕರೆಸಲಾಗುತ್ತಿದೆ. ಈಚೆಗೆ ಬುಲ್ಸ್‌ ತಂಡದ ಮಾಲೀಕರನ್ನೂ ಪೊಲೀಸರು ವಿಚಾರಣೆ ಮಾಡಿದಾಗ ಈ ವಿಷಯ ಪ್ರಸ್ತಾಪವಾಗಿರಬಹುದು. ಅದಕ್ಕಾಗಿ ಮಿಥುನ್ ಅವರನ್ನು ಕರೆಸಲಾಗುತ್ತಿದೆ ಎಂಬ ಮಾಹಿತಿ ನಮಗಿದೆ’ ಎಂದು ತಿಳಿಸಿದ್ದಾರೆ.

‘ಸದ್ಯ ಸೂರತ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಿಥುನ್ ಆಡುತ್ತಿದ್ದಾರೆ. ಶುಕ್ರವಾರ ಕರ್ನಾಟಕ ತಂಡವು ಸೆಮಿಫೈನಲ್‌ನಲ್ಲಿ ಆಡಲಿದೆ. ಟೂರ್ನಿ ಮುಗಿದ ನಂತರ ಬೆಂಗಳೂರಿಗೆ ಮರಳಿ ಮಾಹಿತಿ ನೀಡುವುದಾಗಿ ಮಿಥುನ್ ಅವರು ಸಿಸಿಬಿಗೆ ತಿಳಿಸಿದ್ದಾರೆ. ಪೊಲೀಸರ ತನಿಖೆಗೆ ಸಹಕರಿಸಲು ಸಂಪೂರ್ಣವಾಗಿ ಸಿದ್ಧರಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.