ADVERTISEMENT

ಉತ್ತರ ಕರ್ನಾಟಕದಲ್ಲಿ ಕ್ಯಾನ್ಸರ್‌ ಆಸ್ಪತ್ರೆ

ಕಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ನೂತನ ಆಡಳಿತ ಭವನ ಉದ್ಘಾಟನೆ: ಸುಧಾಕರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 5:20 IST
Last Updated 22 ನವೆಂಬರ್ 2020, 5:20 IST
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಶನಿವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ ಅವರು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿದರು
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಶನಿವಾರ ಆರೋಗ್ಯ ಸಚಿವ ಡಾ. ಕೆ. ಸುಧಾಕರ ಅವರು ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿದರು   

ಹುಬ್ಬಳ್ಳಿ: ‘ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಸಹಯೋಗದಲ್ಲಿ ಅಥವಾ ಪ್ರತ್ಯೇಕವಾಗಿ ಉತ್ತರ ಕರ್ನಾಟಕದಲ್ಲಿ ಸುಸಜ್ಜಿತ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪನೆ ಮಾಡಲು ಚಿಂತನೆ ನಡೆದಿದೆ’ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

ನಗರದ ಕಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ನೂತನ ಆಡಳಿತ ಭವನ, ಹೃದ್ರೋಗ ಆಸ್ಪತ್ರೆ, ಶವಾಗಾರ, ಕೌಶಲ ತರಬೇತಿ ಕೇಂದ್ರ ಹಾಗೂ ರೆಟಿನಾ ಕ್ಲಿನಿಕ್‌ ಉದ್ಘಾಟಿಸಿ ಮಾತನಾಡಿದ ಅವರು ‘ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ಮಾದರಿ ರಾಜ್ಯವಾಗಬೇಕಾದರೆ, ಪ್ರತಿಯೊಬ್ಬರಿಗೂ ಉತ್ತಮ ಚಿಕಿತ್ಸೆ ದೊರೆಯಬೇಕು. ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳ ಜೊತೆ ಸ್ಥಳೀಯ ಆಸ್ಪತ್ರೆಗಳು ಜೋಡಣೆಯಾಗಬೇಕು. ಆ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಉತ್ಕೃಷ್ಠವಾದ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ಚಿಂತನೆ ನಡೆಸಲಾಗಿದೆ’ ಎಂದು ತಿಳಿಸಿದರು.

‘ರಾಜ್ಯದಾದ್ಯಂತ ಈವರೆಗೆ ಒಂದು ಕೋಟಿ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಿದ್ದು, ಸೋಂಕಿತರ ಚಿಕಿತ್ಸೆಗೆ ₹300 ಕೋಟಿ ವೆಚ್ಚ ಮಾಡಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಇತರೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ ಸಮಸ್ಯೆಗಳನ್ನು ತಂದಿಟ್ಟರು. ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಜೀವದ ಹಂಗು ತೊರೆದು ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಉತ್ತಮ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ. ವಾಣಿಜ್ಯ ನಗರಿ ಹುಬ್ಬಳ್ಳಿಯನ್ನು ಆರೋಗ್ಯ ನಗರಿಯನ್ನಾಗಿ ಮಾಡಬೇಕಿದೆ’ ಎಂದರು.

ADVERTISEMENT

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ‘ಕೇಂದ್ರ ಸರ್ಕಾರ ಎಲ್ಲ ಲಾಬಿಗಳನ್ನು ಮೀರಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದೆ. ದೇಶದಾದ್ಯಂತ 3,600 ಕೇಂದ್ರಗಳನ್ನು ತೆರೆದು ಜನರಿಗೆ ಅಗತ್ಯ ಔಷಧಿಗಳನ್ನು ಕೈಗೆಟಕುವ ದರದಲ್ಲಿ ದೊಯುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಈ ಕೇಂದ್ರಗಳನ್ನು 5 ಸಾವಿರಕ್ಕೆ ಹೆಚ್ಚಿಸುವ ಚಿಂತನೆಯಿದೆ’ ಎಂದರು.

‘ಕೆಲ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರನ್ನು ನಿರ್ಲಕ್ಷ್ಯ ಮಾಡಿದರೂ ಕಿಮ್ಸ್ ವೈದ್ಯರು ಎಲ್ಲ ಸೋಂಕಿತರನ್ನೂ ಕಾಳಜಿಯಿಂದ ನೋಡಿಕೊಂಡು, ಕಿಮ್ಸ್‌ ಹಿರಿಮೆ ಸಾರಿದರು’ ಎಂದು ಸಚಿವ ಜಗದೀಶ ಶೆಟ್ಟರ್‌ ಶ್ಲಾಘಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಶಂಕರಪಾಟೀಲ ಮುನೇನಕೊಪ್ಪ, ಸಿ.ಎಂ. ನಿಂಬಣ್ಣವರ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ, ಮುಖಂಡರಾದ ವಿ.ಎಸ್‌. ಪಾಟೀಲ, ಸಿದ್ದು ಸವದಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಕಿಮ್ಸ್‌ ನಿರ್ದೇಶಕ ರಾಮಲಿಂಗಪ್ಪ ಅಂಟರಟಾನಿ, ರಾಜಶ್ರೀ ಜೈನಾಪುರ ಇದ್ದರು.

ಗ್ರಾಮೀಣ ವೈದ್ಯರಿಗೆ ಬೇಗ ಮುಂಬಡ್ತಿ: ಸಚಿವ

‘ವೈದ್ಯರು ಗ್ರಾಮೀಣ ಪ್ರದೇಶಕ್ಕೆ ತೆರಳಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದನ್ನು ತಡೆಯಲು ಕಾನೂನು ಮೂಲಕ ತಿದ್ದುಪಡಿ ತರಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ, ನಗರ ಪ್ರದೇಶದಲ್ಲಿ ಸೇವೆ ಸಲ್ಲಿಸುವ ವೈದ್ಯರಿಗಿಂತ ಬೇಗ ಮುಂಬಡ್ತಿ ಹಾಗೂ ಹೆಚ್ಚಿಗೆ ವೇತನ ನೀಡಲು ನಿರ್ಧರಿಸಲಾಗಿದೆ. ವಿದೇಶಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ’ ಎಂದು ಸಚಿವ ಸುಧಾಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.