ADVERTISEMENT

ಡಿಕ್ಕಿ ಹೊಡೆಸಿಕೊಂಡು ಠಾಣೆಗೆ ಬಂದ ಚಿಗರಿ!

ಮಿಶ್ರ ಪಥದಲ್ಲಿ ಸಾಗುವಾಗ ನವನಗರ ಮತ್ತು ಬೈರಿದೇವರಕೊಪ್ಪದಲ್ಲಿ ಅಪಘಾತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 11:59 IST
Last Updated 11 ಡಿಸೆಂಬರ್ 2018, 11:59 IST
ಲಾರಿ ಹಾಗೂ ಕಾರು ಡಿಕ್ಕಿ ಹೊಡೆದಿದ್ದರಿಂದ ಬಿಆರ್‌ಟಿಎಸ್‌ನ ಚಿಗರಿ ಬಸ್ಸನ್ನು ಉತ್ತರ ಸಂಚಾರ ಪೊಲೀಸ್‌ ಠಾಣೆಗೆ ತರಲಾಗಿದೆ. ವಿಮಾ ಅಧಿಕಾರಿಗಳು ಬಸ್‌ಗೆ ಆದ ಹಾನಿಯ ಮೊತ್ತವನ್ನು ಅಂದಾಜಿಸಲಿದ್ದಾರೆ–ಪ್ರಜಾವಾಣಿ ಚಿತ್ರ
ಲಾರಿ ಹಾಗೂ ಕಾರು ಡಿಕ್ಕಿ ಹೊಡೆದಿದ್ದರಿಂದ ಬಿಆರ್‌ಟಿಎಸ್‌ನ ಚಿಗರಿ ಬಸ್ಸನ್ನು ಉತ್ತರ ಸಂಚಾರ ಪೊಲೀಸ್‌ ಠಾಣೆಗೆ ತರಲಾಗಿದೆ. ವಿಮಾ ಅಧಿಕಾರಿಗಳು ಬಸ್‌ಗೆ ಆದ ಹಾನಿಯ ಮೊತ್ತವನ್ನು ಅಂದಾಜಿಸಲಿದ್ದಾರೆ–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಪ್ರಾಯೋಗಿಕ ಸಂಚಾರ ಆರಂಭವಾದ ಎರಡು ತಿಂಗಳ ಬಳಿಕ ಬಿಆರ್‌ಟಿಎಸ್‌ನ ಚಿಗರಿ ಬಸ್‌ಗಳು ಮೊದಲ ಬಾರಿಗೆ ಸೋಮವಾರ ಅಪಘಾತಕ್ಕೀಡಾಗಿದ್ದು, ಬಸ್‌ಗಳಿಗೆ ಡಿಕ್ಕಿ ಹೊಡೆದ ಕಾರು ಹಾಗೂ ಲಾರಿಗಳ ಮಾಲೀಕರ ವಿರುದ್ಧ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.

ನವನಗರದ ಬಳಿ ಬಸ್‌ಗೆ ಯು ಟರ್ನ್‌ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆಯಿತು. ಬೈರಿದೇವರಕೊಪ್ಪ ಟರ್ಮಿನಲ್‌ನಲ್ಲಿ ಲಾರಿ ಡಿಕ್ಕಿ ಹೊಡೆಯಿತು. ವಾಹನಗಳ ಮಾಲೀಕರು ಬಸ್‌ಗೆ ಡಿಕ್ಕಿ ಹೊಡೆದಿದ್ದಕ್ಕೆ ಪರಿಹಾರ ನೀಡಲು ಮುಂದಾದರಾದರೂ, ನ್ಯಾಯಾಲಯದಲ್ಲಿಯೇ ಪ್ರಕರಣ ಇತ್ಯರ್ಥಕ್ಕೆ ಮುಂದಾಗಿರುವ ಬಿಆರ್‌ಟಿಎಸ್‌ ಕಂಪನಿಯು ಈ ಸಂಬಂಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಹೀಗಾಗಿ, ಅಪಘಾತಕ್ಕೊಳಗಾದ ಬಸ್‌ಗಳನ್ನು ಠಾಣೆಗೆ ತರಲಾಗಿದ್ದು, ವಿಮಾ ಅಧಿಕಾರಿಗಳು ಬಸ್‌ಗೆ ಆದ ಹಾನಿಯ ಮೌಲ್ಯವನ್ನು ನಿರ್ಧರಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಎಸಿಪಿ (ಸಂಚಾರ) ಎಂ.ವಿ. ನಾಗನೂರ, ‘ಎರಡೂ ಪ್ರಕರಣಗಳಲ್ಲಿ ಬಸ್‌ ಚಾಲಕರ ತಪ್ಪಿಲ್ಲ. ಯು ಟರ್ನ್‌ ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾರು ಹಾಗೂ ಲಾರಿಗಳು ಬಸ್‌ಗೆ ಡಿಕ್ಕಿ ಹೊಡೆದಿವೆ. ಹೀಗಾಗಿ, ಎರಡೂ ಬಿಆರ್‌ಟಿಎಸ್‌ ಬಸ್‌ಗಳನ್ನು ಠಾಣೆಗೆ ತರಲಾಗಿದ್ದು, ಪ್ರಾದೇಶಿಕ ಸಾರಿಗೆ ಆಯುಕ್ತರು ಹಾಗೂ ವಿಮಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ’ ಎಂದರು.

ADVERTISEMENT

ನಿಯಮಗಳ ಉಲ್ಲಂಘನೆ: ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಈ ನಿಯಮವನ್ನು ಯಾರೂ ಉಲ್ಲಂಘಿಸುವುದಿಲ್ಲ ಎಂಬ ಭರವಸೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪಿ. ರಾಜೇಂದ್ರ ಚೋಳನ್‌ ಬಸ್‌ ಪ್ರಾಯೋಗಿಕ ಸಂಚಾರ ಆರಂಭಿಸಿದ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದರು. ಆದರೆ, ಈ ಭರವಸೆ ಹುಸಿಯಾಗಿದ್ದು, ಬೈಕು, ಕಾರುಗಳು ಹಾಗೂ ಪೊಲೀಸ್‌ ಸೇರಿದಂತೆ ವಿವಿಧ ಇಲಾಖೆಗಳ ವಾಹನಗಳೇ ಕಾರಿಡಾರ್‌ನಲ್ಲಿ ಸಂಚರಿಸುತ್ತಿವೆ. ಇದರಿಂದಾಗಿ ಬಿಆರ್‌ಟಿಎಸ್‌ ಬಸ್‌ಗಳಿಗೆ ಹಾನಿಯಾಗುವ ಸಂಭವವಿದೆ ಎಂದು ಸಂಸ್ಥೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಬಿಆರ್‌ಟಿಎಸ್‌ ಡಿಜಿಎಂ ಬಸವರಾಜ ಕೇರಿ, ‘ಬಹುತೇಕ ಕಡೆ ಖಾಸಗಿ ವಾಹನ ಮಾಲೀಕರು ಬಿಆರ್‌ಟಿಎಸ್‌ಗೆ ಮೀಸಲಾದ ರಸ್ತೆಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ. ಕಾರಿಡಾರ್‌ನಲ್ಲಿ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿ ಪೊಲೀಸ್‌ ಇಲಾಖೆ ಅಧಿಸೂಚನೆ ಹೊರಡಿಸಬೇಕಿದೆ. ನಂತರವಷ್ಟೇ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಬಹುದಾಗಿದೆ’ ಎಂದರು.

‘ಕಾರಿಡಾರ್‌ನಲ್ಲಿ ಸಂಚರಿಸುವ ಖಾಸಗಿ ವಾಹನಗಳಿಗೆ ಚಿಗರಿ ಬಸ್‌ ಡಿಕ್ಕಿ ಹೊಡೆದರೂ ನಾವು ಅದರ ದುರಸ್ತಿ ವೆಚ್ಚ ಭರಿಸಲಾಗುವುದಿಲ್ಲ. ಏಕೆಂದರೆ, ಆ ವಾಹನಗಳು ಅಕ್ರಮವಾಗಿ ಕಾರಿಡಾರ್‌ನಲ್ಲಿ ಸಂಚರಿಸುತ್ತಿರುತ್ತವೆ. ಹೀಗಾಗಿ ಸರ್ವಿಸ್‌ ರಸ್ತೆಯಲ್ಲಿಯೇ ಇತರೆ ವಾಹನಗಳು ಸಾಗಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.