ADVERTISEMENT

ಪೊಲೀಸ್ ಕ್ರೀಡಾಕೂಟ: ಸಿಎಆರ್‌ ತಂಡದ ಮುಡಿಗೆ ಸಮಗ್ರ ಪ್ರಶಸ್ತಿ

ಐ.ಎಸ್. ದೇಸಾಯಿ, ಪಿ.ಎಲ್‌. ರಾಠೋಡಗೆ ವೈಯಕ್ತಿಕ ವೀರಾಗ್ರಣಿ ಗರಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 17:05 IST
Last Updated 7 ಮಾರ್ಚ್ 2021, 17:05 IST
ಹುಬ್ಬಳ್ಳಿಯಲ್ಲಿ ಭಾನುವಾರ ಮುಕ್ತಾಯಗೊಂಡ  ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ (ನಗರ ಸಶಸ್ತ್ರ ಮೀಸಲು) ಪೊಲೀಸ್ ತಂಡ ಸಮಗ್ರ ಪ್ರಶಸ್ತಿ ಪಡೆಯಿತು
ಹುಬ್ಬಳ್ಳಿಯಲ್ಲಿ ಭಾನುವಾರ ಮುಕ್ತಾಯಗೊಂಡ  ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ (ನಗರ ಸಶಸ್ತ್ರ ಮೀಸಲು) ಪೊಲೀಸ್ ತಂಡ ಸಮಗ್ರ ಪ್ರಶಸ್ತಿ ಪಡೆಯಿತು   

ಹುಬ್ಬಳ್ಳಿ: ನಗರದಲ್ಲಿ ಭಾನುವಾರ ಮುಕ್ತಾಯಗೊಂಡ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ಸಿಎಆರ್ (ನಗರ ಸಶಸ್ತ್ರ ಮೀಸಲು) ಪೊಲೀಸ್ ತಂಡ ಸಮಗ್ರ ಪ್ರಶಸ್ತಿ ಪಡೆಯಿತು. ಸಿಎಆರ್‌ನ ಐ.ಎಸ್. ದೇಸಾಯಿ ಸತತ 11ನೇ ವರ್ಷ ಪುರುಷರ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬೆಂಡಿಗೇರಿ ಪೊಲೀಸ್ ಠಾಣೆಯ ಪಿ.ಎಲ್. ರಾಠೋಡ ಮಹಿಳಾ ವೈಯಕ್ತಿಕ ವೀರಾಗ್ರಣಿಗೆ ಪಾತ್ರರಾದರು.

ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ‘ಪೊಲೀಸರು ಸಹ ವೈದ್ಯರಿದ್ದಂತೆ. ಮನುಷ್ಯರ ಅನಾರೋಗ್ಯಕ್ಕೆ ವೈದ್ಯರು ಚಿಕಿತ್ಸೆ ನೀಡಿದರೆ, ಪೊಲೀಸರು ಕಾನೂನು ವಿರೋಧಿ ಚಟುವಟಿಕೆಗಳಿಗೆ ಚಿಕಿತ್ಸೆ ನೀಡಿ ಸರಿದಾರಿಗೆ ತರುತ್ತಾರೆ. ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಬಾರದಂತೆ ಕಾಯುತ್ತಾರೆ’ ಎಂದರು.

‘ಕ್ರೀಡೆಗಳಲ್ಲಿ ತೋರುವ ಕ್ರೀಡಾ ಸ್ಫೂರ್ತಿಯನ್ನು ಪೊಲೀಸರು ತಮ್ಮ ಕರ್ತವ್ಯದಲ್ಲೂ ತೋರಬೇಕು. ಭಿನ್ನಾಭಿಪ್ರಾಯವನ್ನು ಗೌರವಿಸಬೇಕು. ಹಿರಿಯರು ಹಾಗೂ ಶೋಷಣೆಗೊಳಗಾದವರಿಗೆ ಕಾಳಜಿ ತೋರಬೇಕು’ ಎಂದು ಹೇಳಿದರು.

ADVERTISEMENT

‘ಪ್ರೊಬೆಷನರಿ ತಹಶೀಲ್ದಾರ್ ಆಗಿ ವೃತ್ತಿ ಜೀವನದ ಆರಂಭಿಸಿದ ನನಗೆ ವೃದ್ಧರೊಬ್ಬರು ಹಲವು ತಿಂಗಳುಗಳಿಂದ ವೃದ್ಧಾಪ್ಯ ವೇತನ ಬಂದಿಲ್ಲ ಎಂದು ಮನವಿ ಕೊಟ್ಟರು. ಎರಡು ದಿನದೊಳಗೆ ವೃದ್ಧಾಪ್ಯ ವೇತನ ಬಿಡುಗಡೆಗೆ ವ್ಯವಸ್ಥೆ ಮಾಡಿ ಮಂಜೂರು ಪತ್ರ ಸಿದ್ಧಪಡಿಸಿದ್ದೆ. ಆದರೆ, ಅಷ್ಟೊತ್ತಿಗಾಗಲೇ ಅವರು ತೀರಿಕೊಂಡಿದ್ದರು. ಇದು ನನ್ನ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿತು’ ಎಂದು ನೆನೆದರು.

‘ಸರ್ಕಾರ ನನಗೆ ಗಂಟೆಗೆ ₹200 ಸಂಬಳ ನೀಡುತ್ತದೆ. ಕೆಲಸ ಮಾಡದಿದ್ದರೂ ಪ್ರತಿ ತಿಂಗಳು ಸಂಬಳ ಬರುತ್ತದೆ. ಆದರೆ, ಸರ್ಕಾರಿ ಕಾರ್ಯನಿಮಿತ್ತ ನಮ್ಮ ಬಳಿಗೆ ಬರುವವರಿಗೆ ಪ್ರತಿ ತಾಸು ಸಾವು–ಬದುಕಿನ ಪ್ರಶ್ನೆಯಾಗಿರುತ್ತದೆ. ಅಂತಹವರ ಕೆಲಸವನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.‌

ಪೊಲೀಸ್ ಕಮಿಷನರ್ ಲಾಬೂ ರಾಮ್, ಡಿಸಿಪಿಗಳಾದ ಎಸ್‌.ವಿ. ಯಾದವ್, ಆರ್‌.ಬಿ. ಬಸರಗಿ, ಕೆ. ರಾಮರಾಜನ್, ಎಸಿಪಿಗಳಾದ ವಿನೋದ ಮುಕ್ತೇದಾರ, ಎಸ್‌.ಎಂ. ಹೊಸಮನಿ, ವಿ. ಅನುಷಾ ಇದ್ದರು. ಇನ್‌ಸ್ಪೆಕ್ಟರ್ ಜಗದೀಶ ಹಂಚಿನಾಳ ನಿರೂಪಣೆ ಮಾಡಿದರು.

ಕ್ರಿಕೆಟ್: ಪೊಲೀಸ್ ತಂಡಕ್ಕೆ ಜಯ
ಪೊಲೀಸ್ ಮತ್ತು ಪತ್ರಕರ್ತರ ತಂಡಗಳ ನಡುವೆ, ದೇಶಪಾಂಡೆ ನಗರದ ಜಿಮ್ಖಾನ ಮೈದಾನದಲ್ಲಿ ಭಾನುವಾರ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯದಲ್ಲಿ ಪೊಲೀಸ್ ತಂಡವು, 8 ರನ್‌ಗಳ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪೊಲೀಸ್ ತಂಡ ನಿಗದಿತ 10 ಒವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 98 ರನ್‌ಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ್ದ ಪತ್ರಕರ್ತರ ತಂಡ 5 ವಿಕೆಟ್ ನಷ್ಟಕ್ಕೆ 90 ರನ್‌ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.