ADVERTISEMENT

ಸಿ.ಡಿ ಪ್ರಕರಣ| ಸದಾನಂದಗೌಡ ಸೇರಿ 12 ಬಿಜೆಪಿಗರ ಹೊರದೂಡಿ: ಸಿ.ಎಂ ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 8:24 IST
Last Updated 5 ಫೆಬ್ರುವರಿ 2023, 8:24 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ    

ಹುಬ್ಬಳ್ಳಿ: ‘ಸಿ.ಡಿ ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಮಂದಿ ಬಿಜೆಪಿ ಮುಖಂಡರನ್ನು ಪಕ್ಷದಿಂದ ಹೊರದೂಡಬೇಕು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಜ್ಜನರ ಸಂಗ ಮಾಡಬೇಕು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉನ್ನತ ಹುದ್ದೆಗಳಲ್ಲಿರುವವರನ್ನು ತನ್ನ ಬಲೆಯಲ್ಲಿ ಸಿಲುಕಿಸಿ, ಸಿ.ಡಿ ಮಾಡಿರುವ ಸ್ಯಾಂಟ್ರೊರವಿ ಈಗ ಎಲ್ಲಿದ್ದಾನೆ? ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಏನಾದರೂ ಉತ್ತರಿಸುತ್ತಾರಾ? ಪರಸತಿ, ಪರಧನದ ಮಹಾಸಂಗಮ ಕಾರ್ಯಕ್ರಮಗಳನ್ನು ಇವರು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಆರೋಪಿ ಮಹಿಳೆಗೆ ಜಾಮೀನು ಸಿಕ್ಕಿದೆ. ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ಕ್ಲೀನ್‍್ಚಿಟ್ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸುವ ಬದಲು, ಕಾರ್ಮಿಕರ ಬಾಯಿಗೆ ಮಣ್ಣು ಹಾಕಿ, ವಿಎಸ್ಎಲ್, ಪೇಪರ್ ಕಾರ್ಖಾನೆಗಳ ಜಾಗವನ್ನು ಮಾರಾಟ ಮಾಡಲು ಮುಂದಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ನಲ್ಲಿ ಕೇವಲ ಐದು ಸಾವಿರ ಕೋಟಿ ನೀಡಲಾಗಿದೆ. ರಾಜ್ಯದ ಸಂಸದರು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ಬಗ್ಗೆ ಕಾಳಜಿ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ರೈಲ್ವೆ ಯೋಜನೆಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ? ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇಂತಹ ದರಿದ್ರ ಗ್ರಹಗಳನ್ನು ತೊಲಗಿಸುವುದೇ ಜೆಡಿಎಸ್ ಸಂಕಲ್ಪ’ ಎಂದು ವಾಗ್ದಾಳಿ ನಡೆಸಿದರು.

‘ಪ್ರಲ್ಹಾದ ಜೋಶಿ ತಮ್ಮಅಣ್ಣ ಭಾಗಿಯಾಗಿದ್ದ ಬ್ಯಾಂಕ್ ಹಗರಣವನ್ನು ಮುಚ್ಚಿಹಾಕಿದರು. ಶಾಸಕ ಜಗದೀಶ ಶೆಟ್ಟರ್ ಅಕ್ರಮ ಆಸ್ತಿ ಗಳಿಸಿದ್ದಾರೆ. ಇವರು ಡೂಪ್ಲಿಕೇಟ್ ಶೆಟ್ಟರ್. ಈದ್ಗಾದಲ್ಲಿ ಗಣೇಶ ಮೂರ್ತಿ ಕೂರಿಸಿದ್ದೇ ನಿಮ್ಮ ಸಾಧನೆಯೇ? ಮೇಲ್ಸೇತುವೆ ನಿರ್ಮಿಸುವ ಅವಕಾಶವಿದ್ದರೂ ಬೈರಿದೇವರಕೊಪ್ಪದಲ್ಲಿ ದರ್ಗಾ ಉರುಳಿಸಿದಿರಿ. ಸಿಎಂ ಬೊಮ್ಮಾಯಿ ಇದಕ್ಕೆ ಕ್ಷಮೆ ಕೇಳಿದರು. ಸಮಾಜದ ಜನರೂ ಶಾಂತ ರೀತಿಯಲ್ಲಿ ವರ್ತಿಸಿದ್ದರಿಂದ ಯಾವುದೇ ಅನಾಹುತ ಆಗಲಿಲ್ಲ’ ಎಂದರು.

‘ಕಾಂಗ್ರೆಸ್ ಬಿಜೆಪಿಯ ಚಿಕ್ಕಪ್ಪನ ಮಗ. ಈ ಬಾರಿಯ ಚುನಾವಣೆಯಲ್ಲಿಅದು 40 ಕ್ಷೇತ್ರಗಳಲ್ಲಷ್ಟೇ ಗೆಲ್ಲಬಹುದು. ಸಿದ್ದರಾಮಯ್ಯಗೆ ಎರಡು ಬಾರಿ ರಾಜಕೀಯ ಜೀವನ ನೀಡಿದೆ. ಆದರೂ ಕೃತಜ್ಞತೆ ಇಲ್ಲ. ಬೇರೆ ಪಕ್ಷಗಳಿಂದ ಉತ್ತಮರು ಬಂದರೆ, ಜೆಡಿಎಸ್ ಸ್ವಾಗತಿಸಲಿದೆ. ಭರವಸೆಗಳನ್ನು ಈಡೇರಿಸುವಲ್ಲಿ ನಾವು ವಿಫಲರಾದರೆ, ಮುಂದಿನ ಚುನಾವಣೆಗೆ ಮತಯಾಚಿಸಲು ಬರುವುದೇ ಇಲ್ಲ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.