ADVERTISEMENT

ದೇಶದ ಪ್ರಗತಿಗೆ ಆರ್ಥಿಕ ನಿರ್ವಹಣೆ ಅಗತ್ಯ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:01 IST
Last Updated 26 ಜುಲೈ 2025, 6:01 IST
ಹುಬ್ಬಳ್ಳಿಯ ಕೇಶ್ವಾಪುರದ ಐಸಿಎಐ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 38ನೇ ವಾರ್ಷಿಕ ಲೆಕ್ಕ ಪರಿಶೋಧಕರ ಸಮ್ಮೇಳನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು
ಹುಬ್ಬಳ್ಳಿಯ ಕೇಶ್ವಾಪುರದ ಐಸಿಎಐ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 38ನೇ ವಾರ್ಷಿಕ ಲೆಕ್ಕ ಪರಿಶೋಧಕರ ಸಮ್ಮೇಳನ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು   

ಹುಬ್ಬಳ್ಳಿ: ‘ದೇಶದ ಆರ್ಥಿಕ ಪ್ರಗತಿಯಲ್ಲಿ ಲೆಕ್ಕಪರಿಶೋಧಕರ ಕೊಡುಗೆ ಅಪಾರವಾಗಿದೆ. ತೆರಿಗೆದಾರರ ಹಣಕಾಸಿನ ವರದಿಯ ನಿಖರತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಅವರು ದೇಶದ ಅಭಿವೃದ್ಧಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿ ಶಾಖೆಯ ವತಿಯಿಂದ ನಗರದ ಕೇಶ್ವಾಪುರದ ಐಸಿಎಐ ಭವನದಲ್ಲಿ ಶುಕ್ರವಾರ ನಡೆದ ಸಂಸ್ಥೆಯ ನವೀಕೃತ ಸಭಾಭವದ ಉದ್ಘಾಟನೆ ಹಾಗೂ 38ನೇ ವಾರ್ಷಿಕ ಲೆಕ್ಕ ಪರಿಶೋಧಕರ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಕಳೆದ 75 ವರ್ಷಗಳಲ್ಲಿ ದೇಶದ ಆರ್ಥಿಕ ಶಿಸ್ತನ್ನು ಕಾಪಾಡುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ. ಸರಿಯಾದ ಲೆಕ್ಕಪತ್ರ ನಿರ್ವಹಣೆ ಇಲ್ಲದಿದ್ದರೆ ಯಾವ ಉದ್ಯಮಿಯೂ ಯಶಸ್ವಿಯಾಗಲಾರ’ ಎಂದು ಅಭಿಪ್ರಾಯಪಟ್ಟರು. 

ADVERTISEMENT

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಸದಸ್ಯ ಮಧುಕರ್‌ ಹಿರೇಗಂಗೆ ಅವರು, ’ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಯು ಶೋಚನೀಯವಾಗಿದೆ. ಸರ್ಕಾರವು ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಬಜೆಟ್‌ನಲ್ಲಿ ಘೋಷಿಸಿರುವ ಅನುದಾನವು ಯಾವ ರೀತಿ ವೆಚ್ಚವಾಗುತ್ತದೆ ಎಂಬುದು ತಿಳಿಯುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮುಂಬೈನ ಸಿಎ ಅನಿಕೇತ್‌ ತಲಾಟಿ ಅವರು, ’ಲೆಕ್ಕಪರಿಶೋಧಕರು ಹೊಸ ಕಾಯ್ದೆಗಳ ಬಗ್ಗೆ ಹೆಚ್ಚು ಅಧ್ಯಯನ ನಡೆಸಬೇಕು. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನದ ತಿಳಿವಳಿಕೆ ಹೊಂದಿರಬೇಕು. ನಮ್ಮ ಸಂಸ್ಥೆಯು ಡಿಜಿಟಲ್‌ ತಂತ್ರಜ್ಞಾನವನ್ನು ಸಿಎ ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿದೆ. ವ್ಯಾಪಾರ ಹಾಗೂ ಉದ್ಯಮದಲ್ಲಿಯೂ ಯಶಸ್ವಿಯಾಗಿ ಅಳವಡಿಸಿಕೊಳ್ಳುವ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನೂ ನೀಡಲಾಗುತ್ತಿದೆ’ ಎಂದರು.

ಹಿರಿಯ ಲೆಕ್ಕಪರಿಶೋಧಕರಾದ ಪುರುಷೋತ್ತಮ್ ಲಾಲ್ ಖಂಡೇಲವಾಲ, ಕೆ.ರಘುವರ ಮಾತನಾಡಿದರು. 

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಹುಬ್ಬಳ್ಳಿಯ ಶಾಖೆಯ ಅಧ್ಯಕ್ಷ ಸಿಎ ಅಕ್ಷಯಕುಮಾರ್ ಸಿಂಘಿ, ಸಿಎ ಮಂಜುನಾಥ ಮೇಟಿ, ಪ್ರಮೋದ ಹೆಗಡೆ, ಅಂಕಿತ ಸುನಿಲ್‌ ತಲಾಟಿ, ಎಸ್‌.ಬಿ.ಶೆಟ್ಟಿ, ಸುಭಾಷ ಪಾಟೀಲ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.