ADVERTISEMENT

ರೈಲ್ವೆಯಲ್ಲಿ ಉದ್ಯೋಗದ ಆಮಿಷ: ಎಎಸ್‌ಐಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:13 IST
Last Updated 11 ಜನವರಿ 2021, 3:13 IST

ಹುಬ್ಬಳ್ಳಿ: ನಗರದ ಎಎಸ್‌ಐ ಪುತ್ರನಿಗೆ ರೈಲ್ವೆ ಇಲಾಖೆಯಲ್ಲಿ ‘ಡಿ’ ದರ್ಜೆ ನೌಕರಿ ಕೊಡಿಸುವುದಾಗಿ ಹೇಳಿ ಅವರಿಂದ ₹2ಲಕ್ಷ ಪಡೆದು ವಂಚಿಸಿರುವ ವ್ಯಕ್ತಿಯ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ರೈಲ್ವೆ ವಿಭಾಗದಲ್ಲಿ ಡಿಪಿಒ (ಡಿವಿಷನಲ್‌ ಪರ್ಸನಲ್‌ ಆಫೀಸರ್‌) ಆಗಿದ್ದ ಸಹದೇವ ಎಸ್‌.ಎಂ. ವಂಚಿಸಿದ ಆರೋಪಿ. ಹುಬ್ಬಳ್ಳಿ ಸಶಸ್ತ್ರ ಮೀಸಲು ಪಡೆಯಲ್ಲಿ ಎಎಸ್‌ಐ ಆಗಿರುವ ರಮೇಶ ಮಾನೆ ವಂಚನೆಗೊಳಗಾದ ವ್ಯಕ್ತಿ.

2019ರ ನ. 22ರಂದು ನಗರದ ನ್ಯೂ ಕಾಟನ್‌ ಮಾರ್ಕೆಟ್‌ ಬಳಿಯಿರುವ ಪಿಕಾಕ್‌ ಹೋಟೆಲ್‌ನ ಕೊಠಡಿಯೊಂದರಲ್ಲಿ ರಮೇಶ ಅವರು ಸಹದೇವ ಅವರೊಂದಿಗೆ ಮಗನಿಗೆ ಉದ್ಯೋಗ ದೊರಕಿಸಿಕೊಡುವ ಕುರಿತು ವ್ಯವಹಾರ ನಡೆಸಿದ್ದರು. ನಂತರ ₹2 ಲಕ್ಷದ ಜೊತೆಗೆ ದಾಖಲೆಗಳನ್ನು ನೀಡಿದ್ದರು.ಕೊನೆಗೆ ಉದ್ಯೋಗವೂ ನೀಡದೆ, ಹಣವೂ ಮರಳಿಸದೆ ಸಹದೇವ ವಂಚಿಸಿದ್ದಾರೆ.

ADVERTISEMENT

‘ನನ್ನ ಪರಿಚಯಸ್ಥರೊಬ್ಬರಿಗೆ ಮೈಸೂರು ರೈಲ್ವೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹದೇವ ಪರಿಚಯವಿದ್ದರು. ಮಗನಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸ ಹಣ ಪಡೆದು ವಂಚನೆ ಮಾಡಿದ್ದಾರೆ’ ಎಂದು ಎಎಸ್‌ಐ ರಮೇಶ ಹೇಳಿದರು.

’ಸಹದೇವ ಈಗ ನಿವೃತ್ತರಾಗಿದ್ದಾರೆ. ಪ್ರಕರಣ ದಾಖಲಿಸಿದವರು ಅವರ ಹೆಸರಲ್ಲಿ ಸುಳ್ಳು ಆರೋಪ ಮಾಡಿರಬಹುದು. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ಮಧ್ಯವರ್ತಿಯಾಗಿ ಬರುವವರನ್ನು ನಂಬಬಾರದು’ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯ ‘ಪ್ರಜಾವಾಣಿ’ಗೆ ತಿಳಿಸಿದರು.

ಕಳವು: ಹಳೇಹುಬ್ಬಳ್ಳಿ ಆರ್‌.ಎನ್‌. ಶೆಟ್ಟಿ ರಸ್ತೆಯ ಬೇಕರಿ ಪಕ್ಕ ಪಾರ್ಕ್‌ ಮಾಡಿದ್ದ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಕಿರಣ ಕುಂಬಾರ ಅವರ ಹೀರೊ ಹೊಂಡಾ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳವು ಮಾಡಲಾಗಿದೆ.ಸಿದ್ಧಾರೂಢ ಮಠದ ಸಂಸ್ಕೃತ ಪಾಠಶಾಲೆಯ ಎದುರು ಮರುಳಸಿದ್ದ ವಿಶ್ವನಾಥ ಅವರು ಪಾರ್ಕ್‌ ಮಾಡಿದ್ದ ಹೊಂಡಾ ಆ್ಯಕ್ಟಿವ್‌ ಸ್ಕೂಟಿ ಸಹ ಕಳುವು ಆಗಿದೆ. ಎರಡೂ ಪ್ರಕರಣ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.