ADVERTISEMENT

ಕೋಳಿ ಮಾಂಸ ಪ್ರಿಯರಿಗೆ ದರ ಏರಿಕೆ ಬರೆ: ₹ 300ರ ಗಡಿ ಮುಟ್ಟಲಿದೆ ಚಿಕನ್‌ ದರ?

ಎಂ.ಚಂದ್ರಪ್ಪ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಕೋಳಿ ಮಾಂಸದ ಅಂಗಡಿ ಮುಂದೆ ಮಾಂಸ ಖರೀದಿಗೆ ನಿಂತಿರುವ ಗ್ರಾಹಕರು  ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಕೋಳಿ ಮಾಂಸದ ಅಂಗಡಿ ಮುಂದೆ ಮಾಂಸ ಖರೀದಿಗೆ ನಿಂತಿರುವ ಗ್ರಾಹಕರು  ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ:ಅವಳಿ ನಗರದಲ್ಲಿ ಕೋಳಿ ಮಾಂಸದ ದರ ದಿನೇ ದಿನೇ ಏರಿಕೆಯಾಗುತ್ತಿದೆ. ಲಾಕ್‌ಡೌನ್‌ ಘೋಷಣೆಯ ಆರಂಭದಲ್ಲಿ ತೀವ್ರ ಕುಸಿದಿದ್ದ ಬೆಲೆ ಸದ್ಯ ಕೆ.ಜಿ.ಗೆ ₹280ಕ್ಕೆ ಏರಿಕೆಯಾಗಿದೆ. ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಳದಿಂದಾಗಿ ಬೆಲೆ ದುಬಾರಿಯಾಗಿದೆ. ಮುಂದಿನ ಕೆಲ ದಿನಗಳ ಮಟ್ಟಿಗೆ ದರ ₹300ರ ಗಡಿ ದಾಟುವ ಸಾಧ್ಯತೆಯೂ ಇದೆ ಎಂದು ಕೋಳಿ ಮಾಂಸ ವ್ಯಾಪಾರಿಗಳ ಒಕ್ಕೂಟ ಅಂದಾಜಿಸಿದೆ.

ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ಹಬ್ಬಿದ ವದಂತಿ ಹಾಗೂ ಹಕ್ಕಿ ಜ್ವರದ ಭೀತಿಯಿಂದಾಗಿ ಜನರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ್ದರು. ಕೆ.ಜಿ. ಮಾಂಸದ ಬೆಲೆ ₹70–80ಕ್ಕೆ ಇಳಿದಿತ್ತು. ತಿಂಗಳವರೆಗೆ ವ್ಯಾಪಾರ ಸ್ಥಗಿತಗೊಂಡಿತ್ತು. ಪಶು ಸಂಗೋಪನೆ ಇಲಾಖೆ, ರಾಜ್ಯ ಕುಕ್ಕುಟೋದ್ಯಮ ಮಂಡಳಿ, ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯು ಕೋಳಿ ಮಾಂಸ ಸೇವನೆಗೂ, ಕೊರೊನಾ ಸೋಂಕಿಗೂ ಯಾವುದೇ ಸಂಬಂಧವಿಲ್ಲ ಎಂದು ಜಾಗೃತಿ ಮೂಡಿಸಿದ ಬಳಿಕ ವ್ಯಾಪಾರ ನಿಧಾನವಾಗಿ ಚೇತರಿಸಿಕೊಂಡಿತು.

ಜನರಲ್ಲಿನ ಆತಂಕ ದೂರವಾದ ಬಳಿಕ ಕೆ.ಜಿ. ಕೋಳಿ ಮಾಂಸ ₹140, ಆ ಬಳಿಕ ₹200ಕ್ಕೆ ಏರಿಕೆಯಾಯಿತು. ಕಳೆದ 15–20 ದಿನಗಳ ಹಿಂದೆ ₹240ಕ್ಕೆ ಏರಿಕೆಯಾಗಿ, ಪ್ರಸ್ತುತ ₹280ಕ್ಕೆ ಮುಟ್ಟಿದೆ. ಕೋಳಿ ಮಾಂಸಕ್ಕೆ ಜಿಲ್ಲಾಡಳಿತ ₹220 ದರ ನಿಗದಿ ಮಾಡಿದ್ದರೂ, ಶರವೇಗದಲ್ಲಿ ಏರಿಕೆಯಾಗುತ್ತಿರುವ ದರದಿಂದಾಗಿ ಗ್ರಾಹಕರು ಕಣ್ಣು, ಬಾಯಿ ಬಿಡುವಂತಾಗಿದೆ.

ADVERTISEMENT

‘ಕಳೆದ ವಾರ ಕೆ.ಜಿ.ಚಿಕನ್‌ ₹250ಕ್ಕೆ ತಂದಿದ್ದೆ. ಈಗ ಏಕಾಏಕಿ ₹280ಕ್ಕೆ ಏರಿಕೆಯಾಗಿದೆ. ಮಾಂಸದ ದರ ಏರಿಕೆ ಆಗುತ್ತಿರುವುದು ನೋಡಿದರೆ ಚಿಕನ್‌, ಮಟನ್‌ ತಿನ್ನುವ ಬಗ್ಗೆಯೇ ಆಲೋಚಿಸಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಆದರ್ಶನಗರದ ನಿವಾಸಿ ಸೋಮಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಡಿಮೆಯಾದ ಕೋಳಿ ಸಾಕಾಣಿಕೆ:‘ಕೊರೊನಾ ಬಂದ ಮೇಲೆ ಬಹುತೇಕ ಪೌಲ್ಟ್ರಿ ಫಾರಂಗಳು ಕೋಳಿ ಮರಿಗಳ ಸಾಕಾಣಿಕೆಯನ್ನು ಕಡಿಮೆ ಮಾಡಿದವು. ಆದರೆ, ಈಗ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ಅನುಗುಣವಾಗಿ ಕೋಳಿಗಳ ಲಭ್ಯತೆ ಇಲ್ಲ. ಹಾಗಾಗಿ ದರ ಏರಿಕೆ ಅನಿವಾರ್ಯವಾಗಿದೆ’ ಎಂದು ಕೋಳಿ ಮಾಂಸ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ನಾಗರಾಜ ಪಟ್ಟಣ ತಿಳಿಸಿದರು.

‘ಪೌಲ್ಟ್ರಿ ಫಾರಂನಲ್ಲಿ 40 ದಿನ ಸಾಕಿದ ನಂತರವೇ ಕೋಳಿ ಮಾರಾಟ ಮಾಡಬಹುದು. ಈಗಷ್ಟೇ ಪೌಲ್ಟ್ರಿ ಫಾರಂಗಳಲ್ಲಿ ಮರಿಗಳ ಹೊಸ ಬ್ಯಾಚ್‌ ಸಾಕಲು ಆರಂಭಿಸಲಾಗಿದೆ. ಕ್ರಮೇಣ ಲಭ್ಯತೆ ಹೆಚ್ಚಾಗಿ, ದರವೂ ಇಳಿಯಲಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.