ADVERTISEMENT

ಹುಬ್ಬಳ್ಳಿ | ಚಿಗರಿ ಬಸ್‌: ಮತ್ತೆ ಅದೇ ಅವಸ್ಥೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:04 IST
Last Updated 23 ಆಗಸ್ಟ್ 2025, 4:04 IST
ದುರಸ್ತಿಗೆ ಹೊರಟ ಚಿಗರಿ ಬಸ್
ದುರಸ್ತಿಗೆ ಹೊರಟ ಚಿಗರಿ ಬಸ್   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಧ್ಯೆ ಸಂಚರಿಸುವ ಬಿಆರ್‌ಟಿಎಸ್‌ ಚಿಗರಿ ಬಸ್‌ಗಳ ಅವ್ಯವಸ್ಥೆ ಮುಂದುವರೆದಿದ್ದು, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಬಸ್‌ಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ. ಅಪಘಾತ ಪ್ರಕರಣಗಳು ಕೂಡ ಸಂಭವಿಸುತ್ತಿವೆ. ಒಟ್ಟಾರೆ, ಪ್ರಯಾಣಿಕರು ಬೇರೆ ಬೇರೆ ಸ್ವರೂಪದ ಸಮಸ್ಯೆಗಳು ಎದುರಿಸುವಂತಾಗಿದೆ.

‘ಮೊದಲೆಲ್ಲ ಬಸ್‌ ಹತ್ತಿದ ಕೂಡಲೇ ಹವಾನಿಯಂತ್ರಣ ಗಾಳಿ ಸೋಕುತಿತ್ತು. ಮುಂದಿನ ತಂಗುದಾಣಗಳ ಬಗ್ಗೆ ಧ್ವನಿವರ್ಧಕಗಳ ಮೂಲಕ ಮಾಹಿತಿ ಸಿಗುತಿತ್ತು. ಹೆಚ್ಚು ದಟ್ಟಣೆಯೂ ಇರುತ್ತಿರಲಿಲ್ಲ. ಆದರೆ, ಈಗ ಹವಾನಿಯಂತ್ರಣ ಗಾಳಿಯು ಇಲ್ಲ. ಮುಂದಿನ ಹಂತದ ತಂಗುದಾಣಗಳ ಬಗ್ಗೆ ವಿವರಣೆಯೂ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಸಂದರ್ಭದಲ್ಲಿ ಗೊಂದಲ ಮತ್ತು ಆತಂಕವಾಗುತ್ತದೆ’ ಎಂದು ಪ್ರಯಾಣಿಕರು ದೂರುತ್ತಾರೆ.

ಬಸ್‌ನಲ್ಲಿ ಅಷ್ಟೇ ಅಲ್ಲ, ಬಸ್‌ ತಂಗುದಾಣಗಳಲ್ಲೂ ಅವ್ಯವಸ್ಥೆ ಇದೆ. ಹಣ ಕೊಟ್ಟು ಪಡೆದ ಟಿಕೆಟ್‌ ಕೆಲವೊಮ್ಮೆ ಸ್ಕ್ಯಾನ್ ಆಗುವುದಿಲ್ಲ. ಕಿರಿದಾದ ಗೇಟ್ ಮೂಲಕ ಒಳಪ್ರವೇಶಿಸಲು ಆಗುವುದಿಲ್ಲ. ಎರಡೂ ಬದಿಯಲ್ಲಿ ಟಿಕೆಟ್‌ ಕೌಂಟರ್‌ಗಳಿದ್ದರೂ ಬಹುತೇಕ ಸಲ ಟಿಕೆಟ್‌ ಕೊಡುವವರು ಇರುವುದಿಲ್ಲ. ಬಸ್‌ ಕಣ್ಣೆದುರಿಗೆ ಹೋಗುತ್ತಿದ್ದರೂ ಅದನ್ನು ನಿಲ್ಲಿಸಲು ಅಥವಾ ಟಿಕೆಟ್ ಇಲ್ಲದೇ ಅದನ್ನು ಹತ್ತಲು ಆಗುವುದಿಲ್ಲ’ ಎಂದು ಹುಬ್ಬಳ್ಳಿ ನಿವಾಸಿ ಶ್ರೀಲತಾ ತಿಳಿಸಿದರು.

ADVERTISEMENT

‘ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿರುವ ಬಿಆರ್‌ಟಿಎಸ್‌ ಬಸ್ ನಿಲ್ದಾಣದ ಸುತ್ತಮುತ್ತಲ ಪರಿಸರ ಇನ್ನಷ್ಟು ಹದಗೆಟ್ಟಿದೆ. ಟಿಕೆಟ್ ಕೊಳ್ಳಲು ಜನದಟ್ಟಣೆ ಇರುತ್ತದೆ. ಜೊತೆಗೆ ಅಲ್ಲಿ ರಸ್ತೆಗಳು ದುರಸ್ತಿ ಕಂಡಿಲ್ಲ. ತೆಗ್ಗುದಿಣ್ಣೆಗಳಲ್ಲಿ ನೀರು ನಿಂತರಂತೂ ಪ್ರಯಾಣಿಕರಿಗೆ ಅವುಗಳನ್ನು ದಾಟಿಕೊಂಡು ಬಂದು, ಬಸ್‌ ಹತ್ತಲು ಪ್ರಯಾಸಪಡುತ್ತಾರೆ’ ಎಂದರು.

‘ಬಸ್‌ಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ.ಬಸ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು’ ಎಂದು ಸಾರಿಗೆ ಸಂಸ್ಥೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.