
ಹುಬ್ಬಳ್ಳಿಯ ಶಹರ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಮಕ್ಕಳನ್ನು ತಹಶೀಲ್ದಾರ್ ಖುರ್ಚಿಯಲ್ಲಿ ಕುಳ್ಳಿರಿಸಿ ಮಕ್ಕಳ ದಿನ ಆಚರಿಸಲಾಯಿತು ಶಹರ ತಹಶೀಲ್ದಾರ್ ಮಹೇಶ ಗಸ್ತಿ ಹಾಜರಿದ್ದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ನಗರದ ವಿವಿಧ ಸರ್ಕಾರಿ ಶಾಲೆಯ ಹತ್ತು ವಿದ್ಯಾರ್ಥಿಗಳು, ಐದು–ಹತ್ತು ನಿಮಿಷ ತಹಶೀಲ್ದಾರ್ (ತಾಲ್ಲೂಕು ದಂಡಾಧಿಕಾರಿ) ಅವರ ಖುರ್ಚಿಯಲ್ಲಿ ಕುಳಿತು ಅಧಿಕಾರ ಚಲಾಯಿಸಿದರು. ಕೆಲವು ಕಡತಗಳನ್ನು ಪರಿಶೀಲಿಸಿ, ಆಡಳಿತ ವೈಖರಿಯ ಬಗ್ಗೆ ಅರಿವು ಮೂಡಿಸಿಕೊಂಡರು.
ತಾಲ್ಲೂಕಾಡಳಿತ ಮತ್ತು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಶುಕ್ರವಾರ ನಗರದ ಮಿನಿ ವಿಧಾನಸೌಧದ ಶಹರ ತಹಶೀಲ್ದಾರ್ ಕಚೇರಿಯಲ್ಲಿ ಮಕ್ಕಳಿಗೆ ಅಧಿಕಾರ ನೀಡುವ ಮೂಲಕ ವಿನೂತನವಾಗಿ ಮಕ್ಕಳ ದಿನ ಆಚರಿಸಲಾಯಿತು.
ತಾಲ್ಲೂಕು ಆಡಳಿತ ವ್ಯಾಪ್ತಿಗೆ 34 ಇಲಾಖೆಗಳು ಒಳಪಟ್ಟಿದ್ದು, ಪ್ರತಿಯೊಂದು ಇಲಾಖೆಯಿಂದ ನಡೆಯುವ ಕಾಗದ ಪತ್ರಗಳ ವ್ಯವಹಾರಗಳನ್ನು ತಿಳಿದುಕೊಳ್ಳಲು ಮಕ್ಕಳು ಯತ್ನಿಸಿದರು. ವಿವಿಧ ಇಲಾಖೆಗಳ ಕಡತಗಳನ್ನು ಪರಿಶೀಲಿಸಿ, ಕಾಲಮಿತಿಯಲ್ಲಿ ವಿಲೇವಾರಿ ಆಗದಿರುವುದನ್ನು ಗಮನಿಸಿದರು. ಸಾರ್ವಜನಿಕರ ಕೆಲಸ ದೇವರ ಕೆಲಸವೆಂದು ತಿಳಿದು, ತಕ್ಷಣ ಅರ್ಜಿ ವಿಲೇವಾರಿಗೆ ಸೂಚಿಸಿದರು.
ವಿವಿಧ ಯೋಜನೆಗಳಿಂದ ಸಾರ್ವಜನಿಕರಿಗೆ ಹಾಗೂ ಫಲಾನುಭವಿಗಳಿಗೆ ದೊರೆಯುವ ಸೌಲಭ್ಯ, ಅವುಗಳನ್ನು ಪಡೆಯುವ ರೀತಿ, ವಿಲೇವಾರಿ ಪ್ರಕ್ರಿಯೆ, ಅವುಗಳಿಗೆ ಬೇಕಾದ ಅರ್ಹತೆಗಳು, ಆಧಾರ್ ಕಾರ್ಡ್ ಮಾಹಿತಿ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಶಹರ ತಹಶೀಲ್ದಾರ್ ಮಹೇಶ ಗಸ್ತಿ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಬಹುತೇಕ ಬಡ ಮತ್ತು ಮಧ್ಯಮ ವರ್ಗದವರೇ ಆಗಿರುತ್ತಾರೆ. ಅವರಿಗೆ ಕಲಿಯಬೇಕು ಎನ್ನುವ ಹಸಿವು ಹೆಚ್ಚಿರುತ್ತದೆ. ಹಸಿವಿನ ಜೊತೆಗೆ ದೊಡ್ಡ ಕನಸು ಕಾಣಬೇಕು. ಆಗ, ಗುರಿ ಮುಟ್ಟುವ ಮಾರ್ಗ ಸರಳವಾಗುತ್ತದೆ. ಬಡತನ ಶಾಶ್ವತವಲ್ಲ, ಓದಿನ ಮೂಲಕ ಉನ್ನತ ಸ್ಥಾನ ಪಡೆದು, ದೊಡ್ಡ ಅಧಿಕಾರಿಯಾಗಬಹುದು’ ಎಂದರು.
ಶಹರ ಬಿಇಒ ಕಚೇರಿಯ ಶಿಕ್ಷಣ ಸಂಯೋಜಕರಾದ ವನಿತಾ ಆರ್., ಪ್ರವೀಣ ಎನ್.ಎಸ್., ಎಸ್.ಎಂ.ಅಂಕಲಿ ಹಾಗೂ ವಿವಿಧ ಶಾಲೆಯ ಮುಖ್ಯಶಿಕ್ಷಕರು ಪಾಲ್ಗೊಂಡಿದ್ದರು.
ತಹಶೀಲ್ದಾರ್ ಖುರ್ಚಿಯಲ್ಲಿ ಕೂತು ಆಡಳಿತ ನಡೆಸುವುದು ಎಂದರೆ ದೊಡ್ಡ ಜವಾಬ್ದಾರಿ. ಕಲ್ಪನೆಯಲ್ಲೂ ನಿರೀಕ್ಷಿಸಿರದ ಅವಕಾಶ ಮಾಡಿಕೊಟ್ಟ ಶಿಕ್ಷಣ ಇಲಾಖೆಗೆ ತಹಶೀಲ್ದಾರ್‌ಗೆ ಆಭಾರಿಲಲಿತಾ ಕೆ. ವಿದ್ಯಾರ್ಥಿನಿ ಸರ್ಕಾರಿ ಪ್ರೌಢಶಾಲೆ ನಾಗಶೆಟ್ಟಿಕೊಪ್ಪ
ತಹಶೀಲ್ದಾರ್ ಖುರ್ಚಿಯಲ್ಲಿ ಕೂತಾಗ ಅನುಭವವೇ ವಿಭಿನ್ನವಾಗಿತ್ತು. ಜೀವನ ಪರ್ಯಂತ ಮರೆಯಲಾಗದ ಕ್ಷಣ. ವೈದ್ಯೆಯಾಗಬೇಕೆನ್ನುವ ಆಸೆ ಇತ್ತು. ಈಗ ಆಡಳಿತಾತ್ಮಕ ಹುದ್ದೆಗೆ ಬರುವ ಕನಸು ಕಟ್ಟುತ್ತೇನೆಅಮೃತಾ ಮೂರಸಿಲ್ಲಿ ಸರ್ಕಾರಿ ಪ್ರೌಢಶಾಲೆ ನೇಕಾರನಗರ
‘ಸ್ಫೂರ್ತಿದಾಯಕ ಕನಸು ನಿಮ್ಮದಾಗಲಿ’
‘ದನದ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಬೇಕೆಂದರೂ ತಹಶೀಲ್ದಾರ್ ಕಚೇರಿಯಿಂದ ಅರ್ಜಿ ವಿಲೇವಾರಿಯಾಗಬೇಕು. ತಾಲ್ಲೂಕಿನ ಕಾನೂನು ಸುವ್ಯವಸ್ಥೆ ಸರ್ಕಾರದ ಅನುದಾನ ಬಳಕೆಗೂ ಅವರೇ ಜವಾಬ್ದಾರರು. ಈ ಸ್ಥಾನದಲ್ಲಿ ಕೂತಾಗ ಪ್ರಬುದ್ಧತೆಯ ಭಾವ ಒಡಮೂಡಿಸಿಕೊಂಡು ಸಾರ್ವಜನಿಕ ಸೇವೆಗೆ ತೆರೆದುಕೊಳ್ಳಬೇಕು. ಅಂಥ ಸ್ಫೂರ್ತಿದಾಯಕ ಭಾವ ಹಾಗೂ ಕನಸು ನಿಮ್ಮಲ್ಲಿ ಮೂಡಬೇಕು ಎನ್ನುವ ದೃಷ್ಟಿಯಿಂದ ತಹಶೀಲ್ದಾರ್ ಖುರ್ಚಿಯಲ್ಲಿ ನಿಮ್ಮನ್ನು ಕುಳ್ಳಿರಿಸಿದ್ದು’ ಎಂದು ತಹಶೀಲ್ದಾರ್ ಮಹೇಶ ಗಸ್ತಿ ಮಕ್ಕಳಿಗೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.