ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬಿಜೆಪಿ ವತಿಯಿಂದ ಗುರುವಾರ 53ನೇ ವಾರ್ಡ್‌ನಲ್ಲಿ ದತ್ತಾತ್ರೇಯ ದೇವಸ್ಥಾನದ ಹತ್ತಿರ ‘ಚಾಯ್ ಪೇ ಚರ್ಚೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಭಾಗೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಮಾತನಾಡಿ ‘ಈ ಕಾಯ್ದೆಯ ಬಗ್ಗೆ ಜನರಲ್ಲಿ, ಅದರಲ್ಲಿಯೂ ಮುಖ್ಯವಾಗಿ ಮುಸ್ಲಿಮರಲ್ಲಿ ತಪ್ಪು ತಿಳಿವಳಿಕೆ ಮೂಡಿದೆ. ಇದನ್ನು ಹೋಗಲಾಡಿಸುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.
ಸ್ಥಳೀಯ ನಿವಾಸಿಗಳಾದ ಬುಡನಸಾಬ್ ಧಾರವಾಡ ಮತ್ತು ಖುರೇಷಿ ಎಂಬುವರು ‘ದಾಖಲೆ ತೋರಿಸದಿದ್ದರೆ ದೇಶದಿಂದ ಹೊರಹಾಕುತ್ತಾರಂತೆ’ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಟ್ಟಿ ‘ಭಾರತದಲ್ಲಿಯೇ ಹುಟ್ಟಿ ಬೆಳೆದವರು ದಾಖಲೆ ಕೊಡುವ ಅಗತ್ಯವಿಲ್ಲ. ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಧಾರ್ಮಿಕ ಶೋಷಣೆಗೆ ಒಳಗಾದವರು ಅರ್ಜಿ ಸಲ್ಲಿಸಿದರೆ ಭಾರತದ ಪೌರತ್ವ ನೀಡಲಾಗುತ್ತದೆ. ಹೊಸ ಕಾಯ್ದೆಯಿಂದ ದೇಶದ ಜನರಿಗೆ ಒಳ್ಳೆಯದಾಗುತ್ತದೆ’ ಎಂದರು.
ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಪ್ರಭು ನವಲಗುಂದ ಮಠ, ಶಿವು ಮೆಣಸಿನಕಾಯಿ, ಚಂದ್ರಶೇಖರ ಗೋಕಾಕ, ರಂಗಾಬದ್ದಿ, ಕೆ. ರಾಜು, ಪೂರ್ಣಿಮಾ ಶಿಂಧೆ, ಅನುರಾಧಾ ಚಿಲ್ಲಾಳ, ಸುವರ್ಣ ಜಂಗಮಗೌಡರ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.