ಹುಬ್ಬಳ್ಳಿ: ಅವಳಿ ನಗರದಲ್ಲಿ ನೀರು ಪೂರೈಕೆ ನಿರ್ವಹಣೆಗೆ ಸಿಟಿ ವಾಟರ್ ಕಂಪನಿ (ಸಿಡಬ್ಲ್ಯುಸಿ) ರಚಿಸುವ ಬಗ್ಗೆ ಇಲ್ಲಿನ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ವಿಷಯ ಪ್ರಸ್ತಾಪಿಸಿದ ವೀರಣ್ಣ ಸವಡಿ, ಈಗಾಗಲೇ ಎಲ್ ಆಂಡ್ ಟಿ ಕಂಪನಿ 24X7 ನೀರಿನ ಕಾಮಗಾರಿ ನಿರ್ವಹಿಸುತ್ತಿದೆ. ಕೆಯುಐಡಿಎಫ್‌ಸಿ ಮೇಲುಸ್ತುವಾರಿ ಮಾಡುತ್ತಿದೆ. ಆದರೂ ಕುಡಿಯುವ ನೀರಿಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿಲ್ಲ’ ಎಂದರು.
‘ಸಿಡಬ್ಲ್ಯುಸಿ ರಚನೆಗೆ ಇರುವ ನಿಯಮಗಳೇನು, ಅದರಿಂದ ಮುಂದೆ 24X7 ನೀರು ಪೂರೈಕೆ, ನಿರ್ವಹಣೆಗೆ ಹೇಗೆ ಅನುಕೂಲವಾಗುತ್ತದೆ ಎಂಬುದನ್ನು ವಿವರವಾಗಿ ಚರ್ಚಿಸಬೇಕು. ಈ ಬಗ್ಗೆ ಸರ್ವಪಕ್ಷಗಳ ಸದಸ್ಯರ ಸಭೆ ಕರೆದು ಚರ್ಚೆ ನಡೆಸಿ, ನಂತರ ಠರಾವು ಪಾಸು ಮಾಡಬೇಕು’ ಎಂದರು.
ಈರೇಶ ಅಂಚಟಗೇರಿ ಮಾತನಾಡಿ, ‘ಎಲ್ ಆ್ಯಂಡ್ ಟಿ ಕಂಪನಿ ಐದು ವರ್ಷಗಳಲ್ಲಿ 24X7 ಕುಡಿಯುವ ನೀರಿನ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಬೇಕು. ನಂತರ ಏಳು ವರ್ಷ ನಿರ್ವಹಿಸಬೇಕೆಂದು ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಕಾಮಗಾರಿ ಇನ್ನೂ ಮುಗಿದಿಲ್ಲ’ ಎಂದರು.
‘ನಿತ್ಯ ನೀರಿನ ಸಮಸ್ಯೆಯಾದಾಗ ಅದಕ್ಕೆ ಮಹಾನಗರ ಪಾಲಿಕೆ ಮತ್ತು ಸದಸ್ಯರು ಉತ್ತರಿಸಬೇಕಾಗುತ್ತದೆ. ಈ ಸಮಿತಿಯ ಅಧ್ಯಕ್ಷರಾಗಿರುವ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬಂದು ಸಮಸ್ಯೆ ಬಗೆಹರಿಸುವುದರಿಲ್ಲ. ಸಿಡಬ್ಲ್ಯುಸಿಯ ಕಾರ್ಯವೈಖರಿ ಏನು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದರು.
ಸದಸ್ಯರಾದ ರಾಜಣ್ಣ ಕೊರವಿ, ಉಮೇಶಗೌಡ ಕೌಜಗೇರಿ ಮಾತನಾಡಿ, ‘ಸಿಡಬ್ಲ್ಯುಸಿ ಗೊಂದಲದಿಂದ ಕೂಡಿದ್ದು, ರಚನೆಯಾದ ನಂತರ ಎಷ್ಟು ದಿನ ಜಾರಿಯಲ್ಲಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸರ್ಕಾರ ಸ್ಥಳೀಯ ಸಂಸ್ಥೆ ಸದಸ್ಯರ ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಚರ್ಚೆ ಆಗಬೇಕು’ ಎಂದು ಹೇಳಿದರು.
ಆಯುಕ್ತ ರುದ್ರೇಶ ಘಾಳಿ, ‘ಸಿಟಿ ವಾಟರ್ ಕಂಪನಿ ರಚಿಸುವುದು ವರ್ಲ್ಡ್ ಬ್ಯಾಂಕ್ ಲೋನ್‌ನ ಷರತ್ತುಗಳಲ್ಲೊಂದು. ಇದನ್ನು ಕಡ್ಡಾಯವಾಗಿ ರಚಿಸಬೇಕು. ಈ ಸಂಬಂಧ 2023ರಲ್ಲಿ ಸಚಿವ ಸಂಪುಟದಲ್ಲಿಯೂ ತೀರ್ಮಾನ ಆಗಿದೆ’ ಎಂದರು.
‘2022ರ ಮೇ 27ರಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಈ ಬಗ್ಗೆ ಠರಾವು ಪಾಸು ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಇದರ ಆಧ್ಯಕ್ಷರಾಗಿರುತ್ತಾರೆ. ಮೇಯರ್, ಹಣಕಾಸು ಸ್ಥಾಯಿ ಸಮಿತಿ ಸದಸ್ಯರು ಇದರ ಇದರಲ್ಲಿರುತ್ತಾರೆ’ ಎಂದರು.
‘ಸಿಡಬ್ಲ್ಯುಸಿ ರಚನೆ ಬಗ್ಗೆ ಸ್ಪಷ್ಟತೆ ಇಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಆಯುಕ್ತರು ಮುಂದಿನ ಸಾಮಾನ್ಯ ಸಭೆಯಲ್ಲಿ ಈ ವಿಷಯವನ್ನು ಮಂಡನೆ ಮಾಡಬೇಕು’ ಎಂದು ಮೇಯರ್ ಅನುಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಪಮೇಯರ್ ಸಂತೋಷ್ ಚವ್ಹಾಣ್ ಆದೇಶಿಸಿದರು.
ಅಮರಗೋಳದ ಆರ್ಯಭಟ ಟೆಕ್ ಪಾರ್ಕ್‌ನಲ್ಲಿ ಅನುಷಾ ಸಾಗರ್ ಹಿರೇಮನಿ ಅವರಿಗೆ ನಿವೇಶನ ಮಂಜೂರು ಮಾಡಬೇಕು. ಅವರು ಅಲ್ಲಿ ಐಟಿ ಉದ್ಯಮ ಸ್ಥಾಪಿಸಿದರೆ ಈ ಭಾಗದ ಎಂಜಿನಿಯರಿಂಗ್ ಪದವೀಧರರಿಗೆ ಅನುಕೂಲವಾಗಲಿದೆ. ನಿವೇಶನ ಮಂಜೂರು ಮಾಡುವ ಬಗ್ಗೆ ಠರಾವು ಪಾಸು ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಸಂಬಂಧಿಸಿದವರು ಈ ಬಗ್ಗೆ ಅರ್ಜಿ ಸಲ್ಲಿಸಬೇಕು. ಆಯುಕ್ತರು ಈ ಬಗ್ಗೆ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಮಂಡಿಸಬೇಕು ಎಂದು ಮೇಯರ್ ಆದೇಶ ಮಾಡಿದರು.
‘ರಾತ್ರಿ ವೇಳೆ ಸ್ವಚ್ಛತೆ ಮಾಡಿದರೆ ಬೆಳಿಗ್ಗೆ ವ್ಯಾಪಾರಿಗಳು ವ್ಯಾಪಾರ ಆರಂಭಿಸಲು ಅನುಕೂಲವಾಗುತ್ತದೆ. ಇದಕ್ಕಾಗಿ ಹೆಚ್ವುವರಿಯಾಗಿ ವಾಹನ ಚಾಲಕರನ್ನು ನೇಮಕ ಮಾಡಿಕೊಂಡರೆ ₹18 ಸಾವಿರ ಕೊಡಬೇಕಾಗುತ್ತದೆ. ಈಗ ಇರುವ ಚಾಲಕರಿಂದ ಸೇವೆ ಪಡೆದರೆ ₹8 ಸಾವಿರ ಸಾಕು. ಎಲ್ಲ ಮಾರುಕಟ್ಟೆ ಪ್ರದೇಶದಲ್ಲಿ ಈ ರೀತಿ ಮಾಡುವ ಚಿಂತನೆ ಇದೆ’ ಎಂದು ಆಯುಕ್ತ ರುದ್ರೇಶ ಘಾಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.