ADVERTISEMENT

ಪೌರಕಾರ್ಮಿಕರ ಸಂಘಕ್ಕೆ ಕೊಠಡಿ; ಜಟಾಪಟಿ

ಪೌರಕಾರ್ಮಿಕರು, ಪಾಲಿಕೆಯ ಕಾಂಗ್ರೆಸ್ ಸದಸ್ಯರಿಂದ ಪ್ರತ್ಯೇಕ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:53 IST
Last Updated 20 ನವೆಂಬರ್ 2025, 4:53 IST
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ಜನತಾ ಬಜಾರ್‌ ಕಟ್ಟಡದ ಎದುರು ಬುಧವಾರ ಪಾಲಿಕೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯ ಜನತಾ ಬಜಾರ್‌ ಕಟ್ಟಡದ ಎದುರು ಬುಧವಾರ ಪಾಲಿಕೆಯ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಕಚೇರಿಗಾಗಿ ಮಹಾನಗರ ಪಾಲಿಕೆ ಒಡೆತನದ ಕಟ್ಟಡದಲ್ಲಿ ಕೊಠಡಿ ನೀಡಿದ್ದನ್ನು ಖಂಡಿಸಿ ಪಾಲಿಕೆಯ ಆಯುಕ್ತರ ಕಚೇರಿ ಎದುರು ಕಾಂಗ್ರೆಸ್ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಸಂಜೆ ನಿಗದಿಯಾಗಿದ್ದ ಕಚೇರಿ ಉದ್ಘಾಟನಾ ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು, ಸಂಘದ ಸದಸ್ಯರು ಚನ್ನಮ್ಮ ವೃತ್ತದ ಬಳಿಯ ಜನತಾ ಬಜಾರ್‌ ಕಟ್ಟಡದ ಎದುರು ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಸಂಘದ ಕಚೇರಿಗೆ ಕೊಠಡಿ ನೀಡಿದ ಬಗ್ಗೆ ಅಧಿಕೃತ ಆದೇಶ ಪ್ರತಿ ಸಿಗದ ಹಿನ್ನೆಲೆಯಲ್ಲಿ, ಕಚೇರಿಯ ಉದ್ಘಾಟನೆ ಕಾರ್ಯಕ್ರಮವನ್ನು ಸಂಘದ ಪದಾಧಿಕಾರಿಗಳು ಒಂದು ವಾರ ಮುಂದೂಡಿದ್ದಾರೆ.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಮಹಾನಗರ ಪಾಲಿಕೆ ಆವರಣ, ಜನತಾ ಬಜಾರ್‌ ಕಟ್ಟಡದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು. ಸಂಘದ ಕಚೇರಿಗೆ ಪ್ರವೇಶ ನಿಷೇಧಿಸಲಾಯಿತು.

ಏಕಾಏಕಿ ಉದ್ಘಾಟನಾ ಕಾರ್ಯಕ್ರಮ ರದ್ದಾಗಿದ್ದನ್ನು ಖಂಡಿಸಿ ಪೌರಕಾರ್ಮಿಕರು, ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಚನ್ನಮ್ಮ ವೃತ್ತದ ಸುತ್ತಮುತ್ತ ವಾಹನ ದಟ್ಟಣೆ ಉಂಟಾಯಿತು. 4.45ಕ್ಕೆ ಆರಂಭವಾದ ಪ್ರತಿಭಟನೆ 6.30ರವರೆಗೂ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್‌ ಹಾಕಿ ಭದ್ರತೆ ಒದಗಿಸಿದ್ದರು. 

‘ನಗರದ ಚನ್ನಮ್ಮ ವೃತ್ತದ ಬಳಿಯ ಜನತಾ ಬಜಾರ್‌ ಕಟ್ಟಡದ ಮೂರನೇ ಮಹಡಿಯಲ್ಲಿನ ಕೊಠಡಿಯೊಂದನ್ನು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ಸಂಘಕ್ಕೆ ನೀಡಲಾಗಿದೆ. ನವೀಕರಣಕ್ಕೆ ₹3 ಲಕ್ಷ ಅನುದಾನ ನೀಡಿದ್ದು, ಆ ಕೆಲಸವೂ ಮುಗಿದಿದೆ.  ಪಾಲಿಕೆ ಅಧಿಕಾರಿಗಳು ಬುಧವಾರ ಏಕಾಏಕಿ ಕಚೇರಿ ಉದ್ಘಾಟನೆ ಮಾಡಬಾರದು ಎಂದು ಹೇಳಿ ಗೊಂದಲ ಸೃಷ್ಟಿಸಿದರು’ ಎಂದು ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಹೇಳಿದರು.

‘ಮೇಯರ್‌ ಜ್ಯೋತಿ ಪಾಟೀಲ ಅವರು ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಹಾಗೂ ಇತರ ಸದಸ್ಯರ ಜತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಠರಾವು ಪ್ರತಿ ಪರಿಶೀಲಿಸಿ, ಕಚೇರಿ ನವೀಕರಣಕ್ಕೆ ಹಣ ನೀಡಿರುವುದನ್ನು ಗಮನಿಸಿದ್ದಾರೆ. ಒಂದು ವಾರದಲ್ಲಿ ಆದೇಶ ಪ್ರತಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಪ್ರತಿಭಟನೆ ಹಿಂಪಡೆದಿದ್ದೇವೆ. ಮಾತು ತಪ್ಪಿದರೆ ಹು–ಧಾ ನಗರದಲ್ಲಿ ಸ್ವಚ್ಛತಾ ಕಾರ್ಯ ಬಂದ್‌ ಮಾಡಿ, ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು’ ಎಂದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಕಚೇರಿ ಎದುರು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

‘ಕಾನೂನು ಬಾಹಿರವಾಗಿ ಠರಾವು’ 

ಹುಬ್ಬಳ್ಳಿ: ‘ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಒಂದು ಸಂಘದ ಕಚೇರಿಗಾಗಿ ಪಾಲಿಕೆಯ ಒಡೆತನದ ಕಟ್ಟಡದಲ್ಲಿ ಕೊಠಡಿ ನೀಡಿದೆ’ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಆಯುಕ್ತರ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪಾಲಿಕೆಯ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ‘ಹೊರ ಗುತ್ತಿಗೆ ಪೌರಕಾರ್ಮಿಕ ಸಂಘಟನೆಯ ಕಚೇರಿಗೆ ಕೊಠಡಿ ನೀಡುವುದನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ವಿರೋಧಿಸಿದ್ದರು. ಆದರೂ ಬಿಜೆಪಿಯವರು ತಮಗೆ ಬಹುಮತ ಇದೆ ಎಂದು  ಕೊಠಡಿ ನೀಡಲು ಕಾನೂನು ಬಾಹಿರವಾಗಿ ಠರಾವು ಪಾಸು ಮಾಡಿದ್ದಾರೆ’ ಎಂದರು. ‘ಪಾಲಿಕೆ ಆಯುಕ್ತರು ಆದೇಶ ನೀಡದಿದ್ದರೂ ಬಿಜೆಪಿಯವರು ದಬ್ಬಾಳಿಕೆ ಮೂಲಕ ಕಚೇರಿ ಉದ್ಘಾಟನೆ ಮಾಡಲು ಮುಂದಾಗಿದ್ದಾರೆ. ಅವರ ವಿರುದ್ಧ  ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು. ‘ನೇರ ವೇತನ ಪೌರಕಾರ್ಮಿಕರ ಸಂಘ ಆಟೊ ಟಿಪ್ಪರ್ ಸಂಘದವರು ಸಹ ಕಚೇರಿಗೆ ಕೊಠಡಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸದೆ ಒಂದು ಸಂಘಟನೆಗೆ ನೀಡಿದ್ದು ಖಂಡನೀಯ’ ಎಂದರು.   ಪಾಲಿಕೆ ಸದಸ್ಯರಾದ ದೊರೆರಾಜ ಮಣಿಕುಂಟ್ಲ ಕವಿತಾ ಕಬ್ಬೇರ ಶ್ರೀನಿವಾಸ ಬೆಳದಡಿ  ಅರ್ಜುನ ಪಾಟೀಲ ಸುನೀತಾ ಬುರಬುರೆ ಮತ್ತು ಮುಖಂಡರಾದ ಪ್ರೇಮನಾಥ ಚಿಕ್ಕತುಂಬಳ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.