ADVERTISEMENT

ಪಾಲಿಕೆಗೆ ಬಂತು ಮತ್ತೆ ದೂಳು ತೆಗೆಯುವ ಯಂತ್ರ

ಮೇ ಎರಡನೇ ವಾರದಲ್ಲಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 16:04 IST
Last Updated 30 ಮಾರ್ಚ್ 2024, 16:04 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನೂತನವಾಗಿ ಖರೀದಿಸಿರುವ ದೂಳು ತೆಗೆಯುವ ಯಂತ್ರ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ನೂತನವಾಗಿ ಖರೀದಿಸಿರುವ ದೂಳು ತೆಗೆಯುವ ಯಂತ್ರ   

ಹುಬ್ಬಳ್ಳಿ: ಹು–ಧಾ ಮಹಾನಗರವನ್ನು ದೂಳು ಮುಕ್ತ ನಗರವನ್ನಾಗಿ ಮಾಡಲು ಮಹಾನಗರ ಪಾಲಿಕೆ ₹2.96 ಕೋಟಿ ವೆಚ್ಚದಲ್ಲಿ ದೂಳು ತೆಗೆಯುವ ಎರಡು ಯಂತ್ರಗಳನ್ನು ಮತ್ತೆ ಖರೀದಿಸಿದೆ. ಪುಣೆಯಿಂದ ಗುರುವಾರ ಈ ಯಂತ್ರಗಳು ಬಂದಿದ್ದು, ಪಾಲಿಕೆ ಆವರಣದಲ್ಲಿ ನಿಲ್ಲಿಸಲಾಗಿದೆ.

ಈ ಹಿಂದೆ ಸುಮಾರು ₹1 ಕೋಟಿ ವೆಚ್ಚ ಮಾಡಿ ದೂಳು ತೆಗೆಯುವ ಸುಧಾರಿತ ಯಂತ್ರ ಖರೀದಿಸಲಾಗಿತ್ತು. ಗಣ್ಯ ವ್ಯಕ್ತಿಗಳು ನಗರಕ್ಕೆ ಬರುತ್ತಾರೆ ಅಂದಾಗ ಮಾತ್ರ ಯಂತ್ರ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಸಮರ್ಪಕ ನಿರ್ವಹಣೆಯಿಲ್ಲದೆ ಅದು ಹಾಳಾಗಿ, ಗುಜರಿಗೆ ಸೇರಿದೆ. ಇದೀಗ ಮತ್ತೆ ಜರ್ಮನ್‌ ತಂತ್ರಜ್ಞಾನದ ಹೊಸ ಮಾದರಿಯ ಯಂತ್ರ ಖರೀದಿಸಲಾಗಿದೆ.

ಮೂರು ವರ್ಷದ ನಿರ್ವಹಣೆ ಗುತ್ತಿಗೆ ಪಡೆದಿರುವ ಪುಣೆ ಮೂಲದ ಚಾಲೆಂಜರ್‌ ಕಂಪನಿಯೇ ಯಂತ್ರಗಳನ್ನು ಪೂರೈಕೆ ಮಾಡುವ ಗುತ್ತಿಗೆ ಪಡೆದಿತ್ತು. ಹೊರಗುತ್ತಿಗೆ ಮೂಲಕ ಪಾಲಿಕೆ ನೇಮಕ ಮಾಡಿಕೊಂಡಿರುವ ಇಬ್ಬರು ಚಾಲಕರಿಗೆ, ಇದೇ ಕಂಪನಿ ತರಬೇತಿ ನೀಡಲಿದೆ. ಇದೀಗ ವಾಹನಗಳ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ADVERTISEMENT

‘ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಯೋಜನೆ (NCAP) ಅಡಿಯಲ್ಲಿ, ಮೊದಲ ಹಂತದಲ್ಲಿ ದೂಳು ತೆಗೆಯುವ ಎರಡು ಯಂತ್ರಗಳನ್ನು ಖರೀದಿಸಲಾಗಿದೆ. ಒಂದು ಯಂತ್ರಕ್ಕೆ ₹1.48 ಕೋಟಿ ವೆಚ್ಚ ಮಾಡಲಾಗಿದ್ದು, ಮೂರು ವರ್ಷದ ನಿರ್ವಹಣೆಗೆ ₹88 ಲಕ್ಷ ವಿನಿಯೋಗಿಸಲಾಗುತ್ತಿದೆ ಆರ್‌ಟಿಒ ಕೆಲಸ ಮುಗಿದ ನಂತರ, ಬಹುಶಃ ಮೇ ಎರಡನೇ ವಾರ ಯಂತ್ರಗಳು ಕಾರ್ಯಾಚರಣೆ ನಡೆಸಲಿವೆ’ ಎಂದು ಪಾಲಿಕೆ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ್‌ ತಿಳಿಸಿದರು.

‘ಪ್ರತಿದಿನ ರಾತ್ರಿ 12ರಿಂದ ಬೆಳಿಗ್ಗೆ 6ರವರೆಗೆ ವಾಹನಗಳು ಕಾರ್ಯಾಚರಣೆ ನಡೆಸಲಿವೆ. ಒಂದು ಯಂತ್ರ ಒಂದು ದಿನಕ್ಕೆ 20 ಕಿ.ಮೀ.ನಿಂದ 25 ಕಿ.ಮೀ.ವರೆಗೆ ಕಾರ್ಯಾಚರಣೆ ನಡೆಸಲಿದ್ದು, 2.5 ಎಂ.ಎಂ. ನಿಂದ 10 ಎಂ.ಎಂ. ಗಾತ್ರದ ದೂಳಿನ ಕಣಗಳನ್ನು ತೆಗೆಯಲಿದೆ. ದೂಳು ತೆಗೆಯುವ ಜೊತೆಗೆ, ನೀರು ಸಹ ಸಿಂಪಡಿಸಿ ರಸ್ತೆಯನ್ನು ದೂಳು ಮುಕ್ತವಾಗಿಸಲಿದೆ. ಐದು ಕಿ.ಮೀ. ದೂಳು ತೆಗೆಯಲು, ಒಂದು ಗಂಟೆ ಕಾರ್ಯಾಚರಣೆಗೆ ಏಳರಿಂದ ಎಂಟು ಲೀಟರ್‌ ಡೀಸೆಲ್‌ ಬೇಕಾಗುತ್ತದೆ. 10 ಗಂಟೆಯಲ್ಲಿ ಸುಮಾರು 40 ಕಿ.ಮೀ. ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಈ ವಾಹನಗಳು ಹೊಂದಿವೆ’ ಎಂದರು.

‘ನಿರ್ವಹಣೆ ಜವಾಬ್ದಾರಿಯನ್ನು ಕಂಪನಿಗೇ ವಹಿಸಿರುವುದರಿಂದ, ಏನೇ ಸಮಸ್ಯೆಯಾದರೂ ಕಂಪನಿಯೇ ನಿಭಾಯಿಸಬೇಕು. ಯಂತ್ರಗಳ ಬಿಡಿಭಾಗಗಳು ಇಲ್ಲ ಎಂದು ಸಬೂಬು ಹೇಳುವಂತಿಲ್ಲ. ಈ ಎಲ್ಲ ನಿಯಮಾವಳಿಗಳನ್ನು ಒಪ್ಪಿಕೊಂಡೇ ಕಂಪನಿ ಗುತ್ತಿಗೆ ಪಡೆದಿದೆ’ ಎಂದು ವಿಜಯಕುಮಾರ್‌ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.