ADVERTISEMENT

ಬೊಮ್ಮಾಯಿ ಸಜ್ಜನರ ಸಂಗ ಮಾಡಲಿ: ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 19:26 IST
Last Updated 5 ಫೆಬ್ರುವರಿ 2023, 19:26 IST
ಸಿ.ಎಂ. ಇಬ್ರಾಹಿಂ
ಸಿ.ಎಂ. ಇಬ್ರಾಹಿಂ   

ಹುಬ್ಬಳ್ಳಿ: ‘ವಾಮ ಮಾರ್ಗದಲ್ಲಿ ಸರ್ಕಾರ ರಚಿಸಿದಿರಲ್ಲ, ನಿಮಗೆ ನಾಚಿಕೆ ಆಗಬೇಕು. ರಮೇಶ ಜಾರಕಿಹೊಳಿ ಸಿ.ಡಿ ಹಿಡಿದು, ಗೃಹ ಸಚಿವರ ಬಳಿ ಹೋಗಿದ್ದಾರೆ. ವಿಷಕನ್ಯೆ ಬಗ್ಗೆ ಮಾತನಾಡುತ್ತಾರೆ. ಆ ಕಟೀಲು, ಪಿಟೀಲು ಬಾರಿಸಿ ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾನೆ. ಇಂತಹ ಪಾಪಿಗಳನ್ನು ಕಟ್ಟಿಕೊಂಡು ಮುಖ್ಯಮಂತ್ರಿಯಾಗಿದ್ದೀರಿ. ಮೊದಲು ಆ ಸ್ಥಾನಕ್ಕೆ ರಾಜೀನಾಮೆ ನೀಡಿ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಡಿ ಪ್ರಕರಣದಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ 12 ಬಿಜೆಪಿ ಮುಖಂಡರನ್ನು ಪಕ್ಷದಿಂದ ಹೊರದೂಡಬೇಕು. ಬೊಮ್ಮಾಯಿ ಇಂತಹ ದುರ್ಜನರ ಸಂಗ ಬಿಟ್ಟು, ಸಜ್ಜನರ ಸಂಗ ಮಾಡಬೇಕು. ಜೆಡಿಎಸ್‌ಗೆ ಬರುವುದಾದರೆ ನಿಮ್ಮನ್ನು ಪಕ್ಷ ಸ್ವಾಗತಿಸುತ್ತದೆ’ ಎಂದು ಹೇಳಿದರು.

‘ಸ್ಯಾಂಟ್ರೊ ರವಿ ಈಗ ಎಲ್ಲಿದ್ದಾನೆ? ಸಾಧು– ಸಂತರ ಈ ನಾಡಿಗೆ ದರಿದ್ರಗಳನ್ನು ಕರೆತಂದರೆ ಮಳೆ–ಬೆಳೆ ಆಗುತ್ತಾ, ಕೊರೊನಾ ಬರದೇ ಇರುತ್ತಾ? ಇವರು ಪರಸತಿ–ಪರಧನದ ಮಹಾಸಂಗಮ ಮಾಡುತ್ತಿದ್ದಾರೆ’ ಎಂದು ಪ್ರಶ್ನಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಕೇವಲ ₹5 ಸಾವಿರ ಕೋಟಿ ನೀಡಲಾಗಿದೆ. ರಾಜ್ಯದ ಸಂಸದರು ಇರೋದು ದಂಡಕ್ಕಾ? ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಇಲ್ಲಿಗೆ ಬಂದರೆ ನಗುವುದೇ ಇಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಮೇಕೆದಾಟು, ರೈಲ್ವೆ ಯೋಜನೆಗಳಿಗೆ ಎಷ್ಟು ಹಣ ಮೀಸಲಿಡಲಾಗಿದೆ? ಈ ಬಗ್ಗೆ ಪ್ರಶ್ನಿಸುವ ಗಂಡಸ್ತನ ಇಲ್ಲವೇ? ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇಂತಹ ದರಿದ್ರ ಗ್ರಹಗಳನ್ನು ತೊಲಗಿಸುವುದೇ ಜೆಡಿಎಸ್ ಸಂಕಲ್ಪ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.