
ಹುಬ್ಬಳ್ಳಿ: ನಾಗರಿಕರಿಗೆ ಸಕಲ ಸೌಲಭ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಾಗಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಲು ಬದ್ಧವಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಉಣಕಲ್ ಪ್ರದೇಶದ ಅಚ್ಚಮ್ಮ ಕಾಲೊನಿಯಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರ ಆಸಕ್ತಿಯಿಂದಾಗಿ ವಾರ್ಡ್‌ನಲ್ಲಿ ಒಳಚರಂಡಿ, ಮುಖ್ಯರಸ್ತೆ ದುರಸ್ತಿ ಕಾರ್ಯ ಹಾಗೂ ಸಮುದಾಯ ನಿರ್ಮಾಣ ಕಾರ್ಯಗಳು ಆಗುತ್ತಿವೆ. ಅಭಿವೃದ್ಧಿಯಲ್ಲಿ ಇದು ಮಾದರಿ ಆಗಲಿದೆ ಎಂದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಶಾಸಕ ಮಹೇಶ ಟೆಂಗಿನಕಾಯಿ ಅವರ ಸಹಕಾರದಲ್ಲಿ ಇನ್ನಷ್ಟು ಪ್ರಗತಿಪರ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
2024ರಲ್ಲಿ ಉಣಕಲ್‌ನಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಮೃತಪಟ್ಟವರ ಎಂಟು ಕುಟುಂಬಗಳ ಪೈಕಿ ನಾಲ್ಕು ಕುಟುಂಬಕ್ಕೆ ಮಹಾನಗರ ಪಾಲಿಕೆಯಿಂದ ತಲಾ ₹1 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಲಾಗುವುದು. ದಾಖಲೆ ಒದಗಿಸುವುದು ಪೂರ್ಣವಾದ ಬಳಿಕ ಇನ್ನುಳಿದ ನಾಲ್ಕು ಕುಟುಂಬಕ್ಕೆ ಪರಿಹಾರ ದೊರಕಲಿದೆ ಎಂದು ತಿಳಿಸಲಾಯಿತು.
ಪಾಲಿಕೆ ವಲಯ ಆಯುಕ್ತ ಕೆಂಭಾವಿ, ಮುಖಂಡ ಸೋಮು ಪಾಟೀಲ, ಪರಶುರಾಮ ಹೊಂಬಾಳ, ಕೆ.ಎಸ್.ಕಾಮಟಿ, ರಾಯಣಗೌಡ ಭೀಮನಗೌಡ್ರ, ಶಂಕರ ಚಿಲ್ಲನ್ನವರ ಮತ್ತಿತರರು ಇದ್ದರು. ವಾರ್ಡ್ ಅಧ್ಯಕ್ಷ ಬಸವರಾಜ ಮಾಡಳ್ಳಿ ಸ್ವಾಗತಿಸಿದರು. ಹಿರಿಯರಾದ ಎಸ್.ಐ. ನೇಕಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.