ADVERTISEMENT

ಹುಬ್ಬಳ್ಳಿ| ಪರಿಹಾರ ನೀಡಿ, ಮೇಲ್ಸೇತುವೆ ಕಾಮಗಾರಿ ಬೇಗ ಮುಗಿಸಿ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:24 IST
Last Updated 23 ನವೆಂಬರ್ 2025, 6:24 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಮೇಲ್ಸೇತುವೆ ಕಾಮಗಾರಿಗೆ ತೊಡಕಾಗಿರುವ ಉಪನಗರ ಠಾಣೆ ಕಟ್ಟಡ ಸ್ಥಳಾಂತರ ಸೇರಿದಂತೆ ಭೂಸ್ವಾಧೀನ ಆಗಲಿರುವ ಖಾಸಗಿ ಕಟ್ಟಡಗಳಿಗೆ ಸಂಬಂಧಿಸಿದ ಪರಿಹಾರವನ್ನು ರಾಜ್ಯ ಸರ್ಕಾರ ಕೊಟ್ಟು, ಕಾಮಗಾರಿ ಬೇಗ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಮೇಲ್ಸೇತುವೆ ನಿರ್ಮಾಣ ರಾಜ್ಯ ಸರ್ಕಾರದ ಯೋಜನೆ. ಇದಕ್ಕೆ ಸಂಬಂಧಿಸಿದ ವಿಶೇಷ ಅನುದಾನವನ್ನು ಈಗಾಗಲೇ ಕೇಂದ್ರ ಸರ್ಕಾರ ನೀಡಿದೆ. ಕಾಮಗಾರಿ ಬೇಗನೆ ಮುಗಿಸುವುದು ರಾಜ್ಯ ಸರ್ಕಾರದ ಹೊಣೆಗಾರಿಕೆ’ ಎಂದರು. 

‘ಕುಸುಗಲ್‌ ಬಳಿ ನಿರ್ಮಾಣ ಹಂತದಲ್ಲಿರುವ ರಿಂಗ್‌ ರೋಡ್‌ ಕಾಮಗಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಸರಿಯಾದ ಡಿಪಿಆರ್‌ ಸಲ್ಲಿಸಬೇಕು. ನಂತರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಆದರೆ, ಇಲ್ಲಿಯೂ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ’ ಎಂದು ದೂರಿದರು. 

ADVERTISEMENT

ಆಡಳಿತ ವ್ಯವಸ್ಥೆ ಕುಸಿತ: ‘ರಾಜ್ಯದಲ್ಲಿ ಆಡಳಿತ ಹಾಗೂ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶಾಸಕರು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ರೈತರ ಹಾಗೂ ಸಾರ್ವಜನಿಕರ ಸಮಸ್ಯೆಯನ್ನು ಕೇಳವವರೇ ಇಲ್ಲವಾಗಿದೆ’ ಎಂದು ಆರೋಪಿಸಿದರು.  

‘ಕೇಂದ್ರ ಸರ್ಕಾರ ವಿದೇಶಗಳಿಂದ 70 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಆಮದು ಮಾಡಿಕೊಂಡಿದೆ. ಇದರಿಂದ ರಾಜ್ಯದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೆಲ್ಲವೂ ಸುಳ್ಳು. ನೀವು ಹಿರಿಯ ರಾಜಕಾರಣಿ, ಅನುಭವಿಯಾಗಿದ್ದು ವಿಚಾರ ಮಾಡಿ ಸರಿಯಾದ ಮಾಹಿತಿಯೊಂದಿಗೆ ಮಾತನಾಡಬೇಕು’ ಎಂದರು. 

‘ಕೇಂದ್ರ ಸರ್ಕಾರ ರೈತರಿಗೆ ಎಂದಿಗೂ ಅನ್ಯಾಯ ಮಾಡಿಲ್ಲ. ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುತ್ತಿರುವ ರಾಜ್ಯದ ಮೆಕ್ಕೆಜೋಳ ರೈತರ ನೆರವಿಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಿದೆ. ಈಗಾಗಲೇ ಕೇಂದ್ರದ ನೋಡಲ್‌ ಏಜೆನ್ಸಿಗಳಾದ ನಾಫೆಡ್‌ ಹಾಗೂ ಎನ್‌ಸಿಸಿಎಫ್ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಮಾಡಲು ತಯಾರಿವೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ರಾಜ್ಯ ಸರ್ಕಾರದ ಅಸ್ಥಿರತೆ ನಾವು ಬಯಸುವುದಿಲ್ಲ. ಈ ಸರ್ಕಾರ ಐದು ವರ್ಷ ಪೂರ್ಣಗೊಳಿಸಬೇಕು. ಇದು ನಮ್ಮ ಆಶಯವೂ ಕೂಡ.‌ ಜನಾದೇಶಕ್ಕೆ ನಾವು ಗೌರವ ನೀಡುತ್ತೇವೆ
ಪ್ರಲ್ಹಾದ ಜೋಶಿ ಕೇಂದ್ರ ಸಚಿವ

‘ಆಡಳಿತ ನಡೆಸಲು ಆಗದಿದ್ದರೆ ಬಿಟ್ಟು ಹೋಗಲಿ’

'ಜನರಿಗೆ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ‘ಗ್ಯಾರಂಟಿ’ ಯೋಜನೆಗಳಿಗೆ ಹಣ ಹೊಂದಿಸುವಲ್ಲಿ ಪರದಾಡುತ್ತಿದೆ. ಆಗಸ್ಟ್‌ನಿಂದ ಗೃಹಲಕ್ಷ್ಮಿ ಯೋಜನೆಯ ಹಣವು ಫಲಾನುಭವಿಗಳ ಖಾತೆಗೆ ಪಾವತಿಯಾಗಿಲ್ಲ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧವೂ ಸಿಗುತ್ತಿಲ್ಲ. ಇದು ಜನರಿಗೆ ಮಾಡುವ ವಂಚನೆ. ಜನಪರ ಆಡಳಿತ ನಡೆಸಲು ಆಗದಿದ್ದರೆ ಬಿಟ್ಟು ಹೋಗಲಿ’ ಎಂದು ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.