ADVERTISEMENT

‘ನೆರೆ ಪರಿಹಾರ ಕೊಡಿ ಇಲ್ಲವೇ, ದಯಾ ಮರಣಕ್ಕೆ ಅವಕಾಶ ನೀಡಿ’

ಸಂತ್ರಸ್ತರಿಂದ ಮಾರ್ಚ್‌ 4ರಂದು ಹುಬ್ಬಳ್ಳಿಯಲ್ಲಿ ಅರೆಬೆತ್ತಲೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 13:46 IST
Last Updated 29 ಫೆಬ್ರುವರಿ 2020, 13:46 IST

ಹುಬ್ಬಳ್ಳಿ: ‘ನೆರೆ ಪರಿಹಾರ ಕೊಡಿ ಇಲ್ಲವೇ, ದಯಾ ಮರಣಕ್ಕೆ ಅವಕಾಶ ನೀಡಿ’ ಎಂಬ ಬೇಡಿಕೆಯೊಂದಿಗೆ ಕುಂದಗೋಳ ತಾಲ್ಲೂಕಿನ ನೆರೆ ಸಂತ್ರಸ್ತ ರೈತರು ಕರ್ನಾಟಕ ಪ್ರಜಾಕ್ರಾಂತಿ ಸೇನೆ ಮತ್ತು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಮಾರ್ಚ್‌ 4ರಂದು ಬೆಳಿಗ್ಗೆ 11ಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಮುತ್ತಣ್ಣ ಶಿವಳ್ಳಿ, ಅತಿವೃಷ್ಟಿಯಿಂದ ಸಂತ್ರಸ್ತರಾದ ರೈತರಿಗೆ ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲದಿರುವುದನ್ನು ಖಂಡಿಸಿ ಅಂದು ಸೀಮೆಎಣ್ಣೆ ಡಬ್ಬಿಯ ಜೊತೆಗೆ ಅರೆಬೆತ್ತಲೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕುಂದಗೋಳ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನೆರೆ ಹಾವಳಿಯಿಂದ ಮನೆಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾಲ್ಲೂಕು ಆಡಳಿತ ಭಾರೀ ಲೋಪದೋಷ ಎಸಗಿದ್ದು, ಮರು ಪರಿಶೀಲನೆ ಮಾಡಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ನೈಜ ಸಂತ್ರಸ್ತರನ್ನು ಕೈಬಿಟ್ಟು ಬೇನಾಮಿ ಅಕೌಂಟ್‌ಗಳಿಗೆ ಪರಿಹಾರದ ಹಣವನ್ನು ವರ್ಗಾವಣೆ ಮಾಡುವ ಮೂಲಕ ತಾಲ್ಲೂಕು ಆಡಳಿತ ₹ 10 ಕೋಟಿಗೂ ಅಧಿಕ ಅವ್ಯವಹಾರ ನಡೆಸಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

₹ 2 ಲಕ್ಷ ಬೆಳೆಸಾಲ ಮನ್ನಾ ಯೋಜನೆಯಲ್ಲಿ ಕ್ಷೇತ್ರದ 15 ಸಾವಿರಕ್ಕೂ ಅಧಿಕ ರೈತರ ಸಾಲ ಮನ್ನಾ ಆಗಿದ್ದು, ಅವರಿಗೆ ಋಣಮುಕ್ತ ಪತ್ರವನ್ನು ನೀಡಲಾಗಿತ್ತು. ಆದರೆ, ಸದ್ಯ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ನಿಮ್ಮ ಸಾಲ ಮನ್ನಾ ಆಗಿಲ್ಲ. ಮರುಪಾವತಿ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.

ಆಶ್ರಯ ಯೋಜನೆಯಡಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ವರ್ಷವಾದರೂ ಹಣ ಬಿಡುಗಡೆಯಾಗದೇ ಇರುವುದರಿಂದ ಸಾವಿರಾರು ಕುಟುಂಬಗಳು ಸಮಸ್ಯೆಗೆ ಒಳಗಾಗಿವೆ ಎಂದು ಹೇಳಿದರು.

ಸರ್ಕಾರಿ ಗಾಂವಠಾಣ, ಹುಲ್ಲುಗಾವಲು ಪ್ರದೇಶ, ಕಂದಾಯ ಇಲಾಖೆ ಜಾಗದಲ್ಲಿ ಹತ್ತಾರು ವರ್ಷಗಳಿಂದ ಮನೆಕಟ್ಟಿಕೊಂಡು ವಾಸವಿರುವ ಕುಟುಂಬಗಳಿಗೆ ಅಕ್ರಮ–ಸಕ್ರಮ ಯೋಜನೆಯಡಿಯಲ್ಲಿ ಪಟ್ಟಾ ನೀಡಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡ ರಾಜಶೇಖರ ಮೆಣಸಿನಕಾಯಿ, ರೈತರಾದ ಬಸವಂತಪ್ಪ ಪತ್ತಾರ, ಬಾಬಾಜಾನ್‌ ಮುಲ್ಲಾ, ಮಂಜುನಾಥ ಪಾಲವಾಡ್‌, ಹನುಮಂತಗೌಡ ಕೆ.ಪಾಟೀಲ, ನಿರ್ಮಲ ಹನ್ಸಿಯರವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.