ಹುಬ್ಬಳ್ಳಿ: ‘ಧರ್ಮಸ್ಥಳ ಪ್ರಕರಣದ ಹಿಂದೆ ಯಾರ್ಯಾರು ಇದ್ದಾರೆ ಎಂದು ಸಾಕ್ಷಿ ದೂರುದಾರ ನಾಲ್ಕು–ಐದು ಮಂದಿ ಹೆಸರು ಹೇಳಿದ್ದರೂ, ಈವರೆಗೂ ಅವರನ್ನು ಬಂಧಿಸಿಲ್ಲ. ಇದರ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರವಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹೇಗೆ ಬೇಕೋ ಹಾಗೆ ತೇಜೋವಧೆ ಮಾಡಿದರು. ಬುರುಡೆಯನ್ನು ಯಾರು ತಂದುಕೊಟ್ಟರು, ಪ್ರಕರಣದ ಹಿಂದೆ ಯಾರ್ಯಾರು ಇದ್ದಾರೆ ಎಂದು ಮುಸುಕುಧಾರಿ ಹೇಳಿಕೆ ನೀಡಿದ್ದಾನೆ. ಹೀಗಿದ್ದಾಗಲೂ ಅವರನ್ನು ಬಂಧಿಸದೆ, ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ’ ಎಂದು ಕಿಡಿಕಾರಿದರು.
‘ಮೃತ ವ್ಯಕ್ತಿಯ ಹೂತ ಶವ ಹೊರ ತೆಗೆಯಬೇಕೆಂದರೆ ಕೋರ್ಟ್ ಅನುಮತಿ ಬೇಕಾಗುತ್ತದೆ. ಆದರೆ, ಧರ್ಮಸ್ಥಳದಲ್ಲಿ ಅದ್ಯಾವುದನ್ನೂ ಪಾಲಿಸದೆ ಬೇಕಾಬಿಟ್ಟಿಯಾಗಿ ಹತ್ತಕ್ಕೂ ಹೆಚ್ಚು ಕಡೆ ಅಗೆದು ಶೋಧ ನಡೆಸಿದರು. ಎಲ್ಲೂ ಶವದ ಕುರುಹು ಸಿಗಲಿಲ್ಲ. ಸಾಕ್ಷಿ ದೂರುದಾರ ಕೆಲವು ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ. ಇದರ ಹಿಂದೆ ಹೊರ ರಾಜ್ಯದವರ ಕೈವಾಡವಿದ್ದು, ಸರ್ಕಾರ ಅದರ ಭಾಗವಾಗಿದೆ’ ಎಂದು ಹೇಳಿದರು.
‘ದೇಶದಲ್ಲಿ ಇರುವ ಏಕೈಕ ನಿರುದ್ಯೋಗಿ ರಾಹುಲ್ ಗಾಂಧಿ. ಅವರಿಗೆ ತಾನು ಪ್ರಧಾನಿ ಆಗಬೇಕೆನ್ನುವ ಪ್ರಬಲ ಹಂಬಲವಿದೆ. ಅದಕ್ಕಾಗಿ ದೇಶದಲ್ಲಿ ನಿರುದ್ಯೋಗವಿದೆ ಎನ್ನುತ್ತ ಮನಸ್ಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತ ಒಡಾಡುತ್ತಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡುವುದೇ ಅವರ ಜಾಯಮಾನವಾಗಿದೆ’ ಎಂದು ಹರಿಹಾಯ್ದರು.
‘ಸುಪ್ರೀಂ ಕೋರ್ಟ್ ಸೂಚನೆ ಪ್ರಕಾರ ಗಣೇಶೋತ್ಸವ ಸಂದರ್ಭ ರಾತ್ರಿ ಡಿಜೆ ಹಚ್ಚಬಾರದು ಎಂದು ಸರ್ಕಾರ ಹೇಳಿತು. ಆಕ್ಷೇಪದ ನಡುವೆಯೂ ಸೂಚನೆ ಪಾಲಿಸಲಾಯಿತು. ಆದರೆ, ಬೆಳಿಗ್ಗೆ ಐದು ಗಂಟೆಗೇ ಆಜಾನ್ ಮೊಳಗುತ್ತದೆ. ಅದಕ್ಯಾಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ? ಮುಸ್ಲಿಮರಿಗೆ ಒಂದು ನಿಯಮ, ಹಿಂದೂಗಳಿಗೆ ಒಂದು ನಿಯಮವೇ‘ ಎಂದು ಸಚಿವ ಜೋಶಿ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.