ADVERTISEMENT

ಸಂವಿಧಾನ, ಅಂಬೇಡ್ಕರ್‌ಗೆ ಕಾಂಗ್ರೆಸ್‌ನಿಂದ ಅಪಚಾರ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 13:51 IST
Last Updated 12 ಮೇ 2025, 13:51 IST
ಪ್ರಲ್ಹಾದ ಜೋಶಿ 
ಪ್ರಲ್ಹಾದ ಜೋಶಿ    

ಹುಬ್ಬಳ್ಳಿ: ‘ದೇಶದ ಸಂವಿಧಾನ ಮತ್ತು ಅದನ್ನು ರಚಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಬಗ್ಗೆ ಹೆಚ್ಚು ಅಪಪ್ರಚಾರ, ಅವಮಾನ ಮಾಡಿದ್ದು ಕಾಂಗ್ರೆಸ್‌ನವರು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು (ಎಬಿವಿಪಿ) ಸೋಮವಾರ ಆಯೋಜಿಸಿದ್ದ ‘ಸಂವಿಧಾನ–75: ಬದಲಾಯಿಸಿದ್ದು ಯಾರು, ಬಲಪಡಿಸಿದ್ದು ಯಾರು?’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ ಕಡೆಗಣಿಸದೇ ಹೊರತು ಯಾವುದೇ ಗೌರವ ಮತ್ತು ಪ್ರಶಸ್ತಿ ನೀಡಲಿಲ್ಲ’ ಎಂದರು.

‘ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ವ್ಯಕ್ತಿಗೆ ಕಾಂಗ್ರೆಸ್ ‘ಪದ್ಮಭೂಷಣ’ ನೀಡಿ ಸನ್ಮಾನಿಸಿತ್ತು. ಬಿಜೆಪಿ ಬೆಂಬಲಿತ ವಿ.ಪಿ. ಸಿಂಗ್‌ ಸರ್ಕಾರವು ಅಂಬೇಡ್ಕರ್‌ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತು’ ಎಂದರು.

ADVERTISEMENT

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸಂವಿಧಾನಕ್ಕೆ ಹೆಚ್ಚು ತಿದ್ದುಪಡಿ ಆಗಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ನೆಹರೂ,  ಇಂದಿರಾ ಗಾಂಧಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದರು. ಬಿಜೆಪಿಯನ್ನು ಮೀಸಲಾತಿ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ಕಾಂಗ್ರೆಸ್‌ ನಾಯಕ ರಾಜೀವ್‌ ಗಾಂಧಿಯವರೇ ಮೀಸಲಾತಿ ವಿರುದ್ಧ ಸುದೀರ್ಘ ಭಾಷಣ ಮಾಡಿದ್ದರು’ ಎಂದರು.

‘ಅರ್ಥಶಾಸ್ತ್ರದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಅಂಬೇಡ್ಕರ್ ಅವರ ಬಗ್ಗೆ ನೆಹರೂ ಅವರಿಗೆ ಅಭದ್ರತೆ ಕಾಡುತ್ತಿತ್ತು. ಅದಕ್ಕೆ ಅವರು ಅಂಬೇಡ್ಕರ್‌ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿಯನ್ನು ಚುನಾವಣಾ ಕಣಕ್ಕಿಳಿಸಿದರು. ಅಂಬೇಡ್ಕರ್‌ ವಿರುದ್ಧ ಪ್ರಚಾರ ಮಾಡಿ, ಸೋಲಿಸಿದ್ದರು. ಇದನ್ನು ಮರೆಮಾಚಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾವರ್ಕರ್ ಹೆಸರು ಎಳೆದು ತರುತ್ತಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.