ADVERTISEMENT

ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣ: ಬಡ್ಡಿಸಮೇತ ಹಣ ವಾಪಸ್‌ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 5:20 IST
Last Updated 10 ಡಿಸೆಂಬರ್ 2025, 5:20 IST
   

ಧಾರವಾಡ: ಖರೀದಿದಾರನಿಂದ ಹಣ ಪಡೆದು ಪ್ಲಾಟ್‌ ನೋಂದಣಿ ಮಾಡಿಕೊಡದ ಪ್ರಕರಣದಲ್ಲಿ ಹುಬ್ಬಳ್ಳಿಯ ವಾಸವಿ ಹೆರಿಟೇಜ್‌ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ. ಖರೀದಿದಾರಗೆ ಬಡ್ಡಿಸಮೇತ ಹಣ ವಾಪಸ್‌ ನೀಡುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯೆ ವಿಶಾಲಾಕ್ಷಿ ಬೋಳಶೆಟ್ಟಿ ಅವರು ಆದೇಶ ನೀಡಿದ್ದಾರೆ. ಪರಿಹಾರ ₹50 ಸಾವಿರ, ಪ್ರಕರಣದ ವೆಚ್ಚ ₹10 ಸಾವಿರ ನೀಡಬೇಕು, ಖರೀದಿದಾರ‌ಗೆ ಕೊಡಬೇಕಿದ್ದ ₹5.63 ಲಕ್ಷಕ್ಕೆ ವಾರ್ಷಿಕ ಶೇ10ಬಡ್ಡಿ ಲೆಕ್ಕ ಹಾಕಿ ಮೊತ್ತ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಏನಿದು ಪ್ರಕರಣ?: ಹುಬ್ಬಳ್ಳಿಯ ಮಿಶ್ರಿಕೋಟಿಯಲ್ಲಿ ವಾಸವಿ ಹೆರಿಟೇಜ್‌ ಸಂಸ್ಥೆ ಅಭಿವೃದ್ದಿಪಡಿಸುತ್ತಿದ್ದ ಪ್ಲಾಟೊಂದನ್ನು ಧಾರವಾಡದ ರವೀಂದ್ರನಗರದ ನಿವಾಸಿ ಶಿಕ್ಷಕಿ ಪ್ರೆಸಿಲ್ಲಾ ರೋಜಾರಿಯೊ ಅವರು ಖರೀದಿಸಿ, ₹ 6.35 ಲಕ್ಷ ಪಾವತಿಸಿದ್ದರು.

ನೋಂದಣಿ ಖರೀದಿ ಪತ್ರ ಮಾಡಸಿಕೊಡುವಂತೆ ಸಂಸ್ಥೆಯ ಮಹಾಲಕ್ಷ್ಮಿ ಬೊಸ್ಲೆ ಮತ್ತು ಸಂದೀಪ್ ಶಿಂದೆ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ, ಅವರು ಸ್ಪಂದಿಸಿರಲಿಲ್ಲ.

ಕಾನೂನು ನೋಟಿಸ್‌ ನೀಡಿದರೂ ನೋಂದಣಿ ಮಾಡಿಕೊಟ್ಟಿರಲಿಲ್ಲ. ಹಣ ವಾಪಸ್‌ ನೀಡುವಂತೆ ಕೇಳಿದಾಗ, ₹72 ಸಾವಿರ ಕೊಟ್ಟಿದ್ದರು. ಬಾಕಿ ಹಣ ಕೊಟ್ಟಿರಲಿಲ್ಲ. ಪ್ರೆಸಿಲ್ಲಾ ಅವರು ಆಗಸ್ಟ್‌ 4ರಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.