ಹುಬ್ಬಳ್ಳಿ: ‘ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಅವರು ಉದ್ಯೋಗ ಭದ್ರತೆ ಇಲ್ಲದೆ ಪರದಾಡುತ್ತಿದ್ದು, ಸೂಕ್ತ ನ್ಯಾಯ ಸಿಗಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಗರದ ಗೋಕುಲ ರಸ್ತೆಯ ವಿಶ್ವಶ್ರಮ ಚೇತನ ಆವರಣದಲ್ಲಿ ಮಂಗಳವಾರ ನಡೆದ ಶಿಕ್ಷಣ ತಜ್ಞ, ಕಾರ್ಮಿಕ ಮುಖಂಡ ಪ್ರೊ.ಕೆ.ಎಸ್. ಶರ್ಮಾ ಅವರ 92ನೇ ಜನ್ಮದಿನ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಯಾವುದೇ ಸಂದರ್ಭದಲ್ಲಿ ಮನೆಗೆ ಕಳುಹಿಸಬಹುದು. ಶೋಷಣೆಗೆ ಒಳಗಾಗುತ್ತಿರುವ ಅವರು, ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಕೆ.ಎಸ್. ಶರ್ಮಾ ಅವರು ಹೋರಾಟ ನಡೆಸಿದ್ದು, ನಾನು ಸಹ ಸಹಕಾರ ನೀಡುತ್ತೇನೆ’ ಎಂದರು.
‘ಶರ್ಮಾ ಅವರ ಹೋರಾಟ ನೊಂದವರ ಹಾಗೂ ಜನಸಾಮಾನ್ಯರ ಪರವಾಗಿ ಇರುತ್ತದೆ. ಅಂಗವಿಕಲರು ಸಹ ಸೌಲಭ್ಯ ವಂಚಿತರಾಗುತ್ತಿದ್ದು, ಇದೀಗ ಅವರ ಪರವಾಗಿಯೂ ಧ್ವನಿ ಎತ್ತಿರುವುದು, ಹೊಸ ಭರವಸೆ ಸಿಕ್ಕಂತಾಗಿದೆ. ಅವರ ಹೋರಾಟ, ಬದುಕು ಹಾಗೂ ಸಾಹಿತ್ಯ ಎಲ್ಲರಿಗೂ ಮಾದರಿ’ ಎಂದು ಅಭಿಪ್ರಾಯಪಟ್ಟರು.
ವಿಧಾನ ಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ ಮಾತನಾಡಿ, ‘ಧಾರವಾಡದ ಕಲಾಭವನಕ್ಕೆ ಮೊದಲು ಕಡಪಾ ಮೈದಾನ ಎಂದು ಕರೆಯಲಾಗುತ್ತಿತ್ತು. ಅಲ್ಲೊಂದು ಚಿಕ್ಕಕಟ್ಟೆ ಇದ್ದು, ಅದು ಹೋರಾಟದ ಸ್ಥಳವಾಗಿತ್ತು. ನೌಕರರ ಹಕ್ಕಿಗಾಗಿ ಆಗ್ರಹಿಸಿ ಶರ್ಮಾ ಅವರ ಹೋರಾಟ ಅದೇ ಜಾಗದಲ್ಲಿ ನಡೆಯುತ್ತಿತ್ತು. ನಾನು ಸಹ ಪಾಲ್ಗೊಳ್ಳುತ್ತಿದ್ದೆ. ಶರ್ಮಾ ಅವರ ಹೋರಾಟ ಸ್ಫೂರ್ತಿದಾಯಕ’ ಎಂದರು.
ಸುಪ್ರೀಂ ಕೋರ್ಟ್ ವಕೀಲ ಮೋಹನ ಕಾತರಕಿ, ಸಾಹಿತಿ ರಂಜಾನ್ ದರ್ಗಾ, ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಮಾತನಾಡಿದರು.
ಅಭಿನಂದನಾ ಗ್ರಂಥ ‘ಬೆಳಗೊಳಗಣ ಮಹಾಬೆಳಗು’ ಹಾಗೂ ದ.ರಾ. ಬೇಂದ್ರೆ ಅವರ ಪುನರ್ ಮುದ್ರಣಗೊಂಡಿರುವ ‘ನಾಕುತಂತಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಭಾರತ ಏಕತಾ ಆಂದೋಲನ ಮತ್ತು ಬಸವಶಾಂತಿ ಮಿಷನ್ ಸಂಘಟನೆ ವತಿಯಿಂದ ಕೆ.ಎಸ್. ಶರ್ಮಾ ಅವರಿಗೆ ‘ಶ್ರಮಜೀವಿಗಳ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಜರುಗಿತು.
ಪ್ರೊ. ಐ.ಜಿ. ಸನದಿ, ವಿಜ್ಞಾನಿ
ಎಂ. ಬಾಪೂಜಿ ಇದ್ದರು.
ಪ್ರೊ. ಕೆ.ಎಸ್. ಶರ್ಮಾ ಅವರ ವ್ಯಕ್ತಿತ್ವ ಪ್ರಶಸ್ತಿಯನ್ನೂ ಮೀರಿದ್ದು. ಅವರು ಜನಸಾಮಾನ್ಯರ ಹೃದಯದಲ್ಲಿದ್ದಾರೆ. ಅವರ ಶ್ರಮ ಹೋರಾಟಕ್ಕೆ ಯಾವ ಪುರಸ್ಕಾರ ಕೊಟ್ಟರೂ ಕಡಿಮೆಜಗದೀಶ ಶೆಟ್ಟರ್ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.