
ಬಂಧನ
(ಸಾಂದರ್ಭಿಕ ಚಿತ್ರ)
ಹುಬ್ಬಳ್ಳಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ತಿಕ್ಕೋಟಾದ ಕಟ್ಟಡ ಗುತ್ತಿಗೆದಾರ ವಿಠ್ಠಲ ರಾಠೋಡ್ ಅವರನ್ನು ಕೊಲೆ ಮಾಡಿರುವ ಆರೋಪದ ಮೇಲೆ ನವನಗರ ಠಾಣೆ ಪೊಲೀಸರು ಛತ್ತೀಸಗಡ ಮೂಲದ ಮೂವರು ಕಾರ್ಮಿಕರನ್ನು ಬಂಧಿಸಿದ್ದಾರೆ.
ಛತ್ತೀಸಗಡದ ಕಬಿರ್ದಾಮ ಜಿಲ್ಲೆಯ ಜೋಗೀಪುರದ ಮೇಘವ್ ಸತನಾವಿ, ವಿಮಲಾ ಸತನಾವಿ ಮತ್ತು ಭಗವಾನದಾಸ ಸತನಾವಿ ಕೊಲೆ ಆರೋಪಿಗಳು.
‘ವಿಮಲಾ ಅವರು ವಿಠ್ಠಲ ಅವರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೋಪಗೊಂಡ ಅವರ ಪತಿ ಮೇಘವ್ ಅವರು, ಮಗ ಭಗವಾನದಾಸ ಜೊತೆ ಸೇರಿಕೊಂಡು ಕಳೆದ ಶನಿವಾರ ರಾತ್ರಿ ಬಡಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ವಿಠ್ಠಲ ಅವರ ಪುತ್ರ ಸುನೀಲ್ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ:
ನವನಗರದ ಕಾನೂನು ವಿಶ್ವವಿದ್ಯಾಲಯದ ಆಡಳಿತ ಭವನದ ಶೆಡ್ ಬಳಿ ಜ. 10ರಂದು ರಾತ್ರಿ 9.30ರ ಸುಮಾರಿಗೆ ವಿಠ್ಠಲ ಅವರ ಶವ ಪತ್ತೆಯಾಗಿತ್ತು. ಕುಡಿದು ಬಿದ್ದು ಮೃತಪಟ್ಟಿರುವ ಅನುಮಾನದ ಮೇಲೆ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದರು. ಅನುಮಾನ ಬಂದು ಸ್ಥಳ ಪರಿಶೀಲನೆ ಹಾಗೂ ಸಾಕ್ಷಿಗಳ ವಿಚಾರಣೆ ನಡೆಸಿದಾಗ ಕೊಲೆ ಎಂದು ತಿಳಿದು ಬಂದಿತ್ತು. ತನಿಖೆ ತೀವ್ರಗೊಳಿಸಿದಾಗ ಆರೋಪಿಗಳು ಪತ್ತೆಯಾಗಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ‘ವಿಜಯಪುರದ ಗುತ್ತಿಗೆದಾರ ವಿಠ್ಠಲ ಅವರು, ಕಾನೂನು ವಿಶ್ವವಿದ್ಯಾಲಯದ ಆಡಳಿತ ಸೌಧದಲ್ಲಿನ ಕೆಲವು ಸಣ್ಣಪುಟ್ಟ ಕೆಲಸಗಳನ್ನು ಗುತ್ತಿಗೆ ಪಡೆದು, ಛತ್ತೀಸಘಡ ಮೂವರು ಕಾರ್ಮಿಕರು ಇರುವ ಕುಟುಂಬದಿಂದ ಕೆಲಸ ಮಾಡಿಸುತ್ತಿದ್ದರು. ಕುಟುಂಬದ ಮಹಿಳೆಯು ವಿಠ್ಠಲ ಅವರ ಜೊತೆ ಸಲುಗೆಯಿಂದ ಇರುವುದು, ಪತಿ ಮತ್ತು ಮಗನಿಗೆ ಇಷ್ಟವಿರಲಿಲ್ಲ. ಈ ಕುರಿತು ಅವರಿಬ್ಬರು ವಿಠ್ಠಲ ಅವರ ಜೊತೆ ಜಗಳವಾಡಿದ್ದು, ಕೋಪಗೊಂಡ ಮಗ ಭಗವಾನದಾಸ ಬಡಿಗೆಯಿಂದ ತಲೆಗೆ ಹೊಡೆದಿದ್ದಾನೆ. ನಂತರ ಕುಡಿದು ಮೃತಪಟ್ಟಿದ್ದಾರೆ ಎಂದು ಸಾಕ್ಷ್ಯಗಳನ್ನು ನಾಶ ಮಾಡಿ, ಘಟನೆ ಮುಚ್ಚಿಹಾಕಲು ಯತ್ನಿಸಿದ್ದರು’ ಎಂದು ವಿವರಿಸಿದರು.
‘ಮಹಿಳೆಯ ಜೊತೆ ವಿಠ್ಠಲ ಅವರು ಐದಾರು ವರ್ಷಗಳಿಂದ ಸಲುಗೆಯಿಂದ ಇರುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಮಹಿಳೆಯು, ವಿಠ್ಠಲ ಅವರ ಪತ್ನಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಹಣಕ್ಕಾಗಿ ಪೀಡಿಸುತ್ತಿದ್ದ ಮಹಿಳೆ:
‘ಅಪ್ಪ ವಿಠ್ಠಲ ಅವರನ್ನು ಆರೋಪಿಗಳು ಬಡಿಗೆಯಿಂದ ಹೊಡೆದು ಕೊಲೆ ಮಾಡಿ, ಅವರಾಗಿಯೇ ಬಿದ್ದು ಸತ್ತಿದ್ದಾರೆ ಎಂದು ಹೇಳುತ್ತಿದ್ದರು. ಬಿದ್ದ ಜಾಗದಲ್ಲಿ ರಕ್ತದ ಕಲೆ ಇರಲಿಲ್ಲ. ಆರೋಪಗಳ ಹೇಳಿಕೆಯೂ ದ್ವಂದ್ವವಾಗಿತ್ತು. ನಾಲ್ಕು–ಐದು ವರ್ಷದಿಂದ ಮಹಿಳೆ ಅಪ್ಪನ ಬೆನ್ನು ಹತ್ತಿ, ಹಣಕ್ಕಾಗಿ ಪೀಡಿಸುತ್ತಿದ್ದರು’ ಎಂದು ಮೃತ ವಿಠ್ಠಲ ಅವರ ಪತ್ರ ಸುನೀಲ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.