ADVERTISEMENT

ಹುಬ್ಬಳ್ಳಿ | ಭ್ರಷ್ಟಾಚಾರ ಆರೋಪ: ಜನಪ್ರತಿನಿಧಿಗಳ ವಿರುದ್ಧ ಗುತ್ತಿಗೆದಾರರು ಗರಂ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 8:22 IST
Last Updated 21 ಏಪ್ರಿಲ್ 2022, 8:22 IST
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.   

ಹುಬ್ಬಳ್ಳಿ: ಕಾಮಗಾರಿಗಳನ್ನು ಗುತ್ತಿಗೆ ಪಡೆಯುವುದರಿಂದ ಹಿಡಿದು ಪೂರ್ಣಗೊಳಿಸುವ ತನಕ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಸರ್ಕಾರ ಇದನ್ನು ತಡೆಗಟ್ಟಬೇಕು. ಪಾರದರ್ಶಕವಾಗಿ ನಡೆದುಕೊಳ್ಳಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಪಾಲಿಕೆ ಕಚೇರಿ ಆವರಣದಲ್ಲಿ ಪ್ರತಿಭಟಿಸಿದ ಗುತ್ತಿಗೆದಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸರ್ಕಾರ ನಮ್ಮ ಹಿತ ಕಾಯಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಕಾಮಗಾರಿಗಳನ್ನು ಇ–ಟೆಂಡರ್‌ ಮೂಲಕ ಪಡೆದು ಗುಣಮಟ್ಟದ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣಕ್ಕಾಗಿ ನಮ್ಮನ್ನು ಪೀಡಿಸುತ್ತಿದ್ದಾರೆ. ಎಲ್ಲರಿಗೂ ಹಣ ನೀಡಿ ಗುಣಮಟ್ಟದ ಕಾಮಗಾರಿ ಮಾಡುವುದು ಕಷ್ಟವಾಗುತ್ತಿದೆ ಎಂದು ಗುತ್ತಿಗೆದಾರರು ದೂರಿದರು.

ADVERTISEMENT

ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆಯ ಮಾತಿನ ಮೇರೆಗೆ ಕಾರ್ಯಾದೇಶವಿಲ್ಲದೆ ತುರ್ತು ಅಗತ್ಯ ಕಾಮಗಾರಿಗಳನ್ನು ನಿರ್ವಹಿಸುವ ಪರಿಪಾಠ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್‌ ಪಾಟೀಲ ವಿಷಯದಲ್ಲಿಯೂ ಹೀಗೆಯೇ ಆಗಿದೆ. ಅವರು ಭ್ರಷ್ಟ ವ್ಯವಸ್ಥೆಗೆ ಬಲಿಪಶುವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಸಂತೋಷ್‌ ಮಾಡಿದ ₹4.5 ಕೋಟಿ ಮೊತ್ತದ ಕಾಮಗಾರಿಯನ್ನು ಸರ್ಕಾರ ಪಾರದರ್ಶಕ ಕಾಯ್ದೆಯಡಿ ವಿನಾಯಿತಿ ನೀಡಿ ವಿಧಿಬದ್ಧಗೊಳಿಸಬೇಕು. ಅವರ ಕುಟುಂಬದವರಿಗೆ ₹10 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

₹50 ಕೋಟಿ ಮೇಲ್ಟಟ್ಟ ಕಾಮಗಾರಿಗಳ ಅನುಷ್ಠಾನಕ್ಕೆ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು, ಇದಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಲ್ಲಿಯೂ ಗುತ್ತಿಗೆದಾರರ ಶೋಷಣೆಯಾಗುತ್ತಿದೆ. ಪ್ರತಿ ಹಂತದಲ್ಲಿಯೂ ಭ್ರಷ್ಟ ವ್ಯವಸ್ಥೆ ಗುತ್ತಿಗೆದಾರರನ್ನು ಹುರಿದು ಮುಕ್ಕುತ್ತಿದೆ. ಆದ್ದರಿಂದ ಸರ್ಕಾರ ಎಲ್ಲಾ ಮೊತ್ತದ ಕಾಮಗಾರಿ ಅನುಷ್ಠಾನದಲ್ಲಿ ಪಾರದರ್ಶಕತೆ ತೋರಬೇಕು. ಭ್ರಷ್ಟಾಚಾರ ತಡೆಗೆ ಭ್ರಷ್ಟಾಚಾರ ನಿಗ್ರಹ ದಳ ಇರುವಂತೆ ರಾಜ್ಯದಲ್ಲಿ ಕಾಮಗಾರಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.

ಸಂಘದ ಅಧ್ಯಕ್ಷ ವೀರಣ್ಣ ಹಂಚಿನ, ಕಾರ್ಯಾಧ್ಯಕ್ಷ ಶರತ್‌ ದೊಡ್ಡಮನಿ, ಪಂಪಣ್ಣ ಅಂಬಿಗೇರ, ಪ್ರತಾಪ ಡಂಬಳ, ರಶೀದ್‌ ಬೋಲಾಬಾಯಿ, ಮದನ ಎಂ. ಪಂಚಪುತ್ರ, ಗಿರೀಶ ದಂಡಿನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.