ADVERTISEMENT

ಜೈನ ಸಮಾಜದ ಸುಧರ್ಮಗುಪ್ತ ಮಹಾರಾಜರು ಕೋವಿಡ್‌ನಿಂದ ನಿಧನ

​ಪ್ರಜಾವಾಣಿ ವಾರ್ತೆ
Published 22 ಮೇ 2021, 5:17 IST
Last Updated 22 ಮೇ 2021, 5:17 IST
ಸುಧರ್ಮಗುಪ್ತ ಮಹಾರಾಜರು
ಸುಧರ್ಮಗುಪ್ತ ಮಹಾರಾಜರು   

ಹುಬ್ಬಳ್ಳಿ: ಕೋವಿಡ್‌ನಿಂದ ಗುಣಮುಖರಾಗಿ ಮೂರು ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಜೈನಧರ್ಮದ ಸುಧರ್ಮಗುಪ್ತ ಮಹಾರಾಜರು (45) ನಗರದಲ್ಲಿ ನಿಧನರಾಗಿದ್ದಾರೆ.

15 ದಿನಗಳ ಹಿಂದೆ ಸುಧರ್ಮಗುಪ್ತ ಅವರಿಗೆ ಸೋಂಕು ದೃಢಪಟ್ಟಿತ್ತು. ಚೇತರಿಸಿಕೊಂಡ ಬಳಿಕ ಗಂಟಲು ಹಾಗೂ ಮೂಗಿದ ದ್ರವದ ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ಎಂದು ಬಂದಿತ್ತು. ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಧರ್ಮ ಪ್ರಭಾವಕ: ಸುಧರ್ಮಗುಪ್ತ ಮಹಾರಾಜರು ಜೈನ ಸಮುದಾಯದಲ್ಲಿ ಧರ್ಮಪ್ರಭಾವಕ ಎಂದು ಖ್ಯಾತಿ ಪಡೆದಿದ್ದ ಸಂತರಾಗಿದ್ದರು. ಗುಪ್ತಿನಂದಿ ಮಹಾರಾಜರಿಂದ ಸನ್ಯಾಸ ಸ್ವೀಕರಿಸಿ ಜೈನ ಆಗಮಗಳ ಅಭ್ಯಾಸ ಮಾಡಿ, ಪೂಜೆ ಆರಾಧನೆಗಳಲ್ಲಿ ನಿಷ್ಣಾತರಾಗಿದ್ದರು. ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸುತ್ತ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದರು ಎಂದು ಜೈನ ಸಮಾಜದ ಮುಖಂಡ ಶಾಂತಿನಾಥ ಕೆ. ಹೋತಪೇಟಿ ತಿಳಿಸಿದ್ದಾರೆ.

ADVERTISEMENT

ಸುಧರ್ಮಗುಪ್ತ ಮಹಾರಾಜರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ತಿಮ್ಮಾಫುರ ಗ್ರಾಮದ ಬಳಿ ಸುಧರ್ಮ ಸೇವಾ ತೀರ್ಥ ಹೆಸರಿನಲ್ಲಿ ಕ್ಷೇತ್ರ ನಿರ್ಮಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಅಲ್ಲಿ 31 ಅಡಿ ಎತ್ತರದ ಬಾಹುಬಲಿ ಪ್ರತಿಮೆ ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಕೋಲಾರ ಜಿಲ್ಲೆಯಿಂದ ಶಿಲೆಯನ್ನು ತರಿಸಿ ಕೆತ್ತನೆ ಕಾರ್ಯಕ್ಕೂ ಚಾಲನೆ ನೀಡಿದ್ದರು. ವರೂರು ಹಾಗೂ ಸೋಂದಾಮಠಗಳ ಭಟ್ಟಾರಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.