ADVERTISEMENT

ಆರ್ಥಿಕ ದಿವಾಳಿಯತ್ತ ದೇಶ: ಅಬ್ಬಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:29 IST
Last Updated 1 ನವೆಂಬರ್ 2020, 4:29 IST
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಧರಣಿ ಸತ್ಯಾಗ್ರಹದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿದರು   

ಹುಬ್ಬಳ್ಳಿ: ‘ಕೇಂದ್ರ ಸರ್ಕಾರದ ಅವೈಜ್ಞಾನಿಕ ದೃಷ್ಟಿಕೋನದಿಂದ ದೇಶ ಆರ್ಥಿಕ ದಿವಾಳಿಯತ್ತ ಸಾಗಿದ್ದು, ಈ ಪರಿಸ್ಥಿತಿ ಸುಧಾರಿಸಲು ಮನಮೋಹನ್ ಸಿಂಗ್ ಅವರಂಥ ಆರ್ಥಿಕ ತಜ್ಞರ ತುರ್ತು ಅವಶ್ಯಕತೆ ಇದೆ’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಳೇ ಹುಬ್ಬಳ್ಳಿಯ ಇಂಡಿಪಂಪ್ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು ‘ದೇಶ ಬಹಳಷ್ಟು ಸಂಕಷ್ಟದಲ್ಲಿದೆ. ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಈಗಿನ ಪಕ್ಷಕ್ಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದರು.

ಇದೇ ವೇಳೆ ಪಕ್ಷದ ವತಿಯಿಂದ ವಾಲ್ಮೀಕಿ ಜಯಂತಿ, ದಿವಂಗತ ಇಂದಿರಾ ಗಾಂಧಿ ಅವರ 36ನೇ ಪುಣ್ಯಸ್ಮರಣೆ ಮತ್ತು ವಲ್ಲಭಭಾಯಿ ಪಟೇಲ್ ಅವರ ಜನ್ಮದಿನ ಅಂಗವಾಗಿ ನಾಯಕರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.

ADVERTISEMENT

ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಮಾತನಾಡಿ, ‘ಇಂದಿರಾ ಗಾಂಧಿ ಅವರ ಉತ್ತುಂಗ ವ್ಯಕ್ತಿತ್ವ ಹಾಗೂ ಗಟ್ಟಿತನದ ನಿರ್ಧಾರಗಳು ಸ್ಮರಣೀಯ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ ಮಾತನಾಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ಸಾಮಾನ್ಯರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿವೆ. ಹೆಣದ ಮೇಲೆ ಹಣ ಹೊಡೆಯುವ ಕೆಲಸ ಮಾಡುತ್ತಿವೆ’ ಎಂದು ಟೀಕಿಸಿದರು.

ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಿಳಾ ಘಟಕದ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ, ದಶರಥ ವಾಲಿ, ಅಲ್ತಾಫ್‌ ನವಾಜ್ ಕಿತ್ತೂರ, ವಿಜನಗೌಡ ಪಾಟೀಲ, ಮೋಹನ ಅಸುಂಡಿ, ಅಬ್ದುಲ್ ಗನಿ ವಲಿಅಹ್ಮದ್, ಮಹಮೂದ್ ಕೊಳೂರ, ಸಾಗರ ಹಿರೇಮನಿ, ನವೀದ್ ಮುಲ್ಲಾ, ಪ್ರಕಾಶ ಬುರಬುರೆ, ಅಬ್ದುಲ್ ಅಜೀಜ್ ಮುಲ್ಲಾ, ವಾದಿರಾಜ್ ಕುಲಕರ್ಣಿ, ಪ್ರಶಾಂತ ವಾಲಿ, ಇಮ್ರಾನ್ ಸಿದ್ದಿಕಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.