ADVERTISEMENT

ಹುಬ್ಬಳ್ಳಿ ಯುವಕನಿಂದ ಕ್ರಿಕೆಟ್‌ ಆ್ಯಪ್‌ ಅಭಿವೃದ್ಧಿ

ಒಂದೇ ವೇದಿಕೆಯಲ್ಲಿ ಕ್ರಿಕೆಟ್‌ನ ಸಮಗ್ರ ಮಾಹಿತಿಯ ಹೂರಣ

ಪ್ರಮೋದ
Published 12 ಏಪ್ರಿಲ್ 2021, 5:00 IST
Last Updated 12 ಏಪ್ರಿಲ್ 2021, 5:00 IST

ಹುಬ್ಬಳ್ಳಿ: ಯಾವ ದೇಶದಲ್ಲಿ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ? ಮುಂದಿನ ಟೂರ್ನಿ ಯಾವ ರಾಷ್ಟ್ರಗಳ ನಡುವೆ ಆಯೋಜನೆಯಾಗಿದೆ? ಐಪಿಎಲ್‌ ಟೂರ್ನಿಯ ಪಂದ್ಯಗಳ ಫಲಿತಾಂಶವೇನಾಯಿತು?

ಹೀಗೆ ಕ್ರಿಕೆಟ್‌ನ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸಲು ಹಲವಾರು ಆ್ಯಪ್‌ಗಳಿವೆ. ಈಗ ಇವುಗಳ ಸಾಲಿಗೆ ಹುಬ್ಬಳ್ಳಿಯ ಯುವ ಉದ್ಯಮಿ ಸಿದ್ದಾರ್ಥ ಡಂಬಳ ಅಭಿವೃದ್ಧಿ ಪಡಿಸಿದ ‘ಕ್ರಿಕ್‌ ನೌ’ (CRIKNOW) ಆ್ಯಪ್‌ ಸೇರ್ಪಡೆಯಾಗಿದೆ. ಬೇರೆ ಕ್ರಿಕೆಟ್ ಆ್ಯಪ್‌ಗಳಿಗಿಂತ ಇದು ಭಿನ್ನವಾಗಿದ್ದು, ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.

2019ರಲ್ಲಿ ಆ್ಯಪ್‌ ಅಭಿವೃದ್ಧಿ ಪ‍ಡಿಸುವ ಕೆಲಸ ಆರಂಭವಾಗಿದ್ದು, ಈ ಆ್ಯಪ್‌ನಲ್ಲಿ ಕ್ರಿಕೆಟ್‌ ಪಂದ್ಯಗಳ ಲೈವ್‌ ಸ್ಕೋರ್‌, ವೀಕ್ಷಕ ವಿವರಣೆಯ ಮಾಹಿತಿ, ಇನ್ಫೋಗ್ರಾಫಿಕ್‌, ಫ್ಯಾಂಟಸಿ ಅಂಕಗಳು, ವೇಳಾಪಟ್ಟಿ, ಅಂಕಿಅಂಶಗಳ ಮಾಹಿತಿ, ತಂಡಗಳ ಹಾಗೂ ಆಟಗಾರರ ರ‍್ಯಾಂಕಿಂಗ್‌ ಮಾಹಿತಿ ಅಂಗೈಯಲ್ಲಿಯೇ ಸಿಗಲಿದೆ. ಆದ್ದರಿಂದ ಕ್ರಿಕೆಟ್‌ ಪ್ರೇಮಿಗಳ ಪಾಲಿಗೆ ಇದು ಸ್ನೇಹಿಯಾಗಿದೆ.

ADVERTISEMENT

ಸೋಷಿಯಲ್‌ ವಾಲ್‌, ಮಾಹಿತಿ ಡೆಸ್ಕ್‌, ಲೈವ್‌ ಚಾಟ್‌, ರಸಪ್ರಶ್ನೆ, ಕ್ರಿಕೆಟ್‌ ಸಂಬಂಧಿಸಿದ ಪ್ರಶ್ನೆಗಳಿಗೆ ಮತದಾನ ಹೀಗೆ ಆಟದ ಅಭಿಮಾನಿಗಳು ಕೂಡ ಆ್ಯಪ್‌ ಮೂಲಕ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ.

ವಿವಿಧ ದೇಶಗಳಲ್ಲಿ ನಡೆಯುವ ಕ್ರಿಕೆಟ್ ಟೂರ್ನಿಗಳ ಸ್ಕೋರ್‌, ಮುಂಬರುವ ಪಂದ್ಯಗಳು, ಇತ್ತೀಚಿಗೆ ಮುಗಿದ ಪಂದ್ಯಗಳ ಫಲಿತಾಂಶ, ಹೆಚ್ಚು ಪ್ರಚಲಿತದಲ್ಲಿರುವ ಆಟಗಾರರ ಮಾಹಿತಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಪ್ರಕಟಿಸುವ ಏಕದಿನ, ಟೆಸ್ಟ್‌ ಹಾಗೂ ಟಿ–20 ಮಾದರಿಗಳಲ್ಲಿ ತಂಡಗಳ ರ‍್ಯಾಂಕ್ ಪಟ್ಟಿಯ ಪೂರ್ಣ ಮಾಹಿತಿಯೂ ಆ್ಯಪ್‌ನಲ್ಲಿ ಅಳವಡಿಸಲಾಗಿದೆ. ನಿಮ್ಮ ನೆಚ್ಚಿದ ತಂಡವನ್ನು ಆಯ್ಕೆಮಾಡಿಕೊಂಡರೆ ಆ ತಂಡದ ಕ್ರಿಕೆಟ್‌ ಪಂದ್ಯಗಳ ವೇಳಾಪಟ್ಟಿ, ಫಲಿತಾಂಶ ಒಂದೇ ಕಡೆ ಸಿಗುತ್ತದೆ.

‘ಆ್ಯಪ್‌ ಅಭಿವೃದ್ಧಿಗೊಳಿಸುವ ಕಾರ್ಯ ನಿರಂತರವಾಗಿ ನಡೆಯಲಿದ್ದು, ಇನ್ನೂ ಹೊಸತನಗಳನ್ನು ತರುವ ಯೋಚನೆಯಿದೆ. ಈಗ ನಡೆಯುತ್ತಿರುವ ಐಪಿಎಲ್‌ ಟೂರ್ನಿಯ ವೇಳೆ ಸುಮಾರು 10 ಸಾವಿರ ಕ್ರಿಕೆಟ್‌ ಪ್ರೇಮಿಗಳಿಂದ ಆ್ಯಪ್‌ ಬಗ್ಗೆ ಪ್ರತಿಕ್ರಿಯೆ ಪಡೆಯುವ ಉದ್ದೇಶ ಹೊಂದಿದ್ದೇನೆ. ಆ್ಯಪ್‌ ಅನ್ನು ಇದೇ ವರ್ಷ ಮೇ 25ರಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಸಿದ್ದಾರ್ಥ ಡಂಬಳ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.