ADVERTISEMENT

ಕ್ರಿಕೆಟ್‌ ಬೆಟ್ಟಿಂಗ್‌: 58 ಪ್ರಕರಣ, ₹4.23 ಲಕ್ಷ ವಶ

100ಕ್ಕೂ ಹೆಚ್ಚು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:34 IST
Last Updated 17 ಮೇ 2022, 4:34 IST

ಹುಬ್ಬಳ್ಳಿ: ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಬೆಟ್ಟಿಂಗ್‌ ದಂಧೆಗೆ ಸಂಬಂಧಿಸಿ ಹು–ಧಾ ಪೊಲೀಸ್‌ ಕಮಿಷನರೇಟ್‌ನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಈವರೆಗೆ 58 ಪ್ರಕರಣಗಳು ದಾಖಲಾಗಿದ್ದು, ₹4.23 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಮಾರ್ಚ್ 26ರಿಂದ ಏಪ್ರಿಲ್ 15ರವರೆಗೆ 39 ಪ್ರಕರಣಗಳು ದಾಖಲಾಗಿದ್ದು, ₹2.40ಲಕ್ಷ ನಗದು, 60ಕ್ಕೂ ಹೆಚ್ಚು ಮಂದಿ ಬಂಧಿಸಿ, 70ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಏಪ್ರಿಲ್ 15 ರಿಂದ ಮೇ 15ರವರೆಗೆ 19 ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದು, ₹1.83 ಲಕ್ಷ ನಗದು, 40ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ, 50ಕ್ಕೂ ಹೆಚ್ಚು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಸ್ತುತ ವರ್ಷದ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯ ಲೀಗ್‌ ಪಂದ್ಯ ಮುಕ್ತಾಯದ ಹಂತದಲ್ಲಿದ್ದು, ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳು ಎದುರಾಗುತ್ತಿವೆ. ಒಂದೆಡೆ ಕ್ರೀಡಾ ಪ್ರೇಮಿಗಳಲ್ಲಿ ಕ್ರಿಕೆಟ್‌ ಜ್ವರ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಬೆಟ್ಟಿಂಗ್‌ ದಂಧೆ ಹೆಚ್ಚುತ್ತಿದೆ. ಪ್ರತಿದಿನ ಒಂದಿಲ್ಲೊಂದು ಠಾಣೆಗಳಲ್ಲಿ ಮೂರು, ನಾಲ್ಕು ಪ್ರಕರಣಗಳು ದಾಖಲಾಗುತ್ತಲೇ ಇವೆ. ಮೇ 29ಕ್ಕೆ ಅಂತಿಮ ಪಂದ್ಯ ನಡೆಯಲಿದೆ.

ADVERTISEMENT

₹1.49 ಲಕ್ಷ ವಂಚನೆ: ಉದ್ಯೋಕ್ಕಾಗಿ ನೌಕರಿ ಡಾಟ್‌ ಕಾಮ್‌ನಲ್ಲಿ ಧಾರವಾಡದ ಇಂದು ಅವರು ಸಲ್ಲಿಸಿದ ಸ್ವ–ವಿವರದ ಮಾಹಿತಿ ಪಡೆದ ಇಬ್ಬರು ವ್ಯಕ್ತಿಗಳು, ಅವರಿಗೆ ಉದ್ಯೋಗ ನೀಡುವ ನೆಪದಲ್ಲಿ ₹1.49 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.

ನೇಮಕಾತಿ ಪತ್ರ, ಎಂಪ್ಲಾಯಿ ಐಡಿ, ಝೂಮ್‌ ಐಡಿ, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಶುಲ್ಕವೆಂದು ಹಣ ಪಾವತಿಸಬೇಕಾಗುತ್ತದೆ ಎಂದು ವಂಚಕರು, ಇಂದು ಅವರನ್ನು ನಂಬಿಸಿ ಹಣ ವರ್ಗಾಯಿಸಿಕೊಂಡಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ಕು ಪ್ರಕರಣ; ₹34 ಸಾವಿರ ವಶ: ಮೂರುಸಾವಿರ ಮಠದ ತಾಡಪತ್ರಿ ಗಲ್ಲಿ, ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹಾಗೂ ಧಾರವಾಡದ ಗೌಳಿಗಲ್ಲಿ ಬಳಿ ಒ.ಸಿ ಆಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ₹34,185 ನಗದು ಹಾಗೂ 4 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹುಬ್ಬಳ್ಳಿ ಉಪನಗರ, ಗೋಕುಲ ರಸ್ತೆ ಮತ್ತು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಗಳಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಆರೋಪಿ ಬಂಧನ: ಜನತಾ ಬಝಾರ್‌, ದಾಜೀಬಾನ್‌ ಪೇಟೆ ಹಾಗೂ ವಿವಿಧೆಡೆಯ ಮೊಬೈಲ್‌ ಅಂಗಡಿಗಳಿಂದ ಮೊಬೈಲ್‌ ಕಳವು ಮಾಡುತ್ತಿದ್ದ ಆರೋಪಿಯನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿ ₹60 ಸಾವಿರ ಮೌಲ್ಯದ ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೊಬೈಲ್‌ ಕಳವು ಆಗಿರುವ ಕುರಿತು ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.