ADVERTISEMENT

ಪ್ರಶಸ್ತಿ ಹೊಸ್ತಿಲಲ್ಲಿ ಎಚ್‌ಎಸ್‌ಸಿ ‘ಎ’

ಕ್ರಿಕೆಟ್‌: 38 ಅಂಕದೊಂದಿಗೆ ಅಗ್ರಸ್ಥಾನದಲ್ಲಿರುವ ಹುಬ್ಬಳ್ಳಿಯ ತಂಡ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 4:29 IST
Last Updated 22 ಡಿಸೆಂಬರ್ 2021, 4:29 IST

ಹುಬ್ಬಳ್ಳಿ: ಒಂಬತ್ತು ಪಂದ್ಯಗಳಲ್ಲಿ ಗೆಲುವು ಮತ್ತು ಒಂದು ಪಂದ್ಯದಲ್ಲಿ ಟೈ ಸಾಧಿಸಿರುವ ಹುಬ್ಬಳ್ಳಿ ಸ್ಪೋರ್ಟ್ಸ್‌ ಕ್ಲಬ್‌ (ಎಚ್‌ಎಸ್‌ಸಿ) ‘ಎ’ ತಂಡ, ಕೆಎಸ್‌ಸಿಎ ಧಾರವಾಡ ವಲಯದ ಮೊದಲ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಯ ಹೊಸ್ತಿಲಲ್ಲಿದೆ.

ಇಲ್ಲಿನ ಆರ್‌ಐಎಸ್‌ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಎಚ್‌ಎಸ್‌ಸಿ ತಂಡ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ‘ಎ’ ವಿರುದ್ಧ ಏಳು ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಎಚ್‌ಸಿಎ ನೀಡಿದ್ದ 124 ರನ್‌ ಗುರಿಯನ್ನು 15.1 ಓವರ್‌ಗಳಲ್ಲಿ ತಲುಪಿ ನಾಲ್ಕು ಅಂಕ ಗಳಿಸಿತು.

10 ಪಂದ್ಯಗಳಿಂದ ಒಟ್ಟು 38 ಅಂಕಗಳನ್ನು ಹೊಂದಿರುವ ಎಚ್‌ಎಸ್‌ಸಿ ತಂಡ ಅಂಕಪಟ್ಟಿಯಲ್ಲಿ ಸದ್ಯಕ್ಕೆ ಅಗ್ರಸ್ಥಾನದಲ್ಲಿದೆ. ಪ್ರತಿ ತಂಡ ತಲಾ 11 ಪಂದ್ಯಗಳನ್ನಾಡಲಿದ್ದು ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ (9 ಪಂದ್ಯಗಳಿಂದ 32) ಎರಡನೇ ಸ್ಥಾನದಲ್ಲಿದೆ. ಅಂತಿಮ ಅಗ್ರಸ್ಥಾನಕ್ಕಾಗಿ ಈ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

ADVERTISEMENT

ಬೆಳಗಾವಿಯ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅಮೃತ ಪೋತದಾರ ತಂಡ 50 ರನ್‌ಗಳ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ್ದ ಈ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 232 ರನ್‌ ಗಳಿಸಿತು. ಈ ಗುರಿಯ ಎದುರು ಪರದಾಡಿದ ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ ‘ಎ’ ತಂಡ 47.1 ಓವರ್‌ಗಳಲ್ಲಿ 182 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು.

ದಿನದ ಇನ್ನೊಂದು ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ ‘ಎ’ ಎರಡು ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ್ದ ಬೆಳಗಾವಿಯು ದ ಯೂನಿಯನ್‌ ಜಿಮ್ಖಾನಾ ಲಿಮಿಟೆಡ್‌ 219 ರನ್‌ ಗಳಿಸಿತ್ತು. ಈ ಗುರಿಯನ್ನು ಬಿಡಿಕೆ‌ 48.2 ಓವರ್‌ಗಳಲ್ಲಿ ತಲುಪಿ ನಾಲ್ಕು ಅಂಕ ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.