ADVERTISEMENT

‘ಸದೃಢ ಭಾರತ ನಿರ್ಮಾಣಕ್ಕೆ ಮೋದಿ ಬೆಂಬಲಿಸಿ’

ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಪರ ಯತ್ನಾಳ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 16:17 IST
Last Updated 27 ಏಪ್ರಿಲ್ 2024, 16:17 IST
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರವಾಗಿ ಹಮ್ಮಿಕೊಂಡ ಚುನಾವಣೆ ಪ್ರಚಾರರ್ಥ ಸಭೆ ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿದರು.
ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರವಾಗಿ ಹಮ್ಮಿಕೊಂಡ ಚುನಾವಣೆ ಪ್ರಚಾರರ್ಥ ಸಭೆ ಉದ್ದೇಶಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿದರು.   

ಕಲಘಟಗಿ: ಸದೃಢ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ಬು ಬೆಂಬಲಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

ತಾಲ್ಲೂಕಿನ ಗಳಗಿ, ಹುಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ಧಾರವಾಡ ಜಿಲ್ಲಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಪರವಾಗಿ ಹಮ್ಮಿಕೊಂಡ ಚುನಾವಣೆ ಪ್ರಚಾರರ್ಥ ಸಭೆ ಉದ್ದೇಶಿಸಿ ಮಾತನಾಡಿದರು.

ಜಗತ್ತಿನಲ್ಲಿ ಭಾರತ ದೇಶ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರೂ ಬಿಜೆಪಿಗೆ ಮತ ಚಲಾಯಿಸಿ ಎಂದರು.

ADVERTISEMENT

ಕಾಶ್ಮೀರದಲ್ಲಿ ಮೊದಲು ಭಯೋತ್ಪಾದಕರ ಹಾವಳಿ ಮಿತಿ ಮೀರಿ ಜನರು ಸಾವು ನೋವುಗಳ ಮದ್ಯ ಜೀವನ ನಡೆಸುತ್ತಿದ್ದರು. 370 ಆರ್ಟಿಕಲ್ ಜಾರಿಯಾದ ಮೇಲೆ ಶಾಂತಿ ಸುವ್ಯವಸ್ಥೆ ನೆಲೆಸಿ ಅಲ್ಲಿನ ಜನರು ನೆಮ್ಮದಿಯಾಗಿ ಬದುಕುತ್ತಿದ್ದಾರೆ ಎಂದರೆ ಮೋದಿಯವರು ಕಾರಣ ಎಂದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಈಗ ಅಭಿವೃದ್ಧಿಯಿಂದ ವಂಚಿತಗೊಂಡು ಸಾಲದ ಹೊರೆ ಹೆಚ್ಚುತ್ತಿದೆ. ಮುಂದೆ ಸಾಲ ತೀರಿಸುವುದರಲ್ಲಿ ಸರ್ಕಾರ ಕಾಲ ಕಳೆಯುತ್ತದೆ ಜನರು ಆತ್ಮಲೋಕನ ಮಾಡಿಕೊಳ್ಳಿ ಎಂದರು.

ಧಾರವಾಡ ಜಿಲ್ಲೆಯಲ್ಲಿ ಪ್ರಹ್ಲಾದ ಜೋಶಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಅವರ ಕೈ ಬಲಪಡಿಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.

ಅಭಿಮಾನಿಯೊಬ್ಬರು ಮುಂದಿನ ಮುಖ್ಯಮಂತ್ರಿ ಬಸನಗೌಡ ಪಾಟೀಲ್ ಯತ್ನಾಳ ಎಂದು ಘೋಷಣೆ ಕೂಗಿದರು. ಅದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ ‘ನಿಮ್ಮ ಆಶೀರ್ವಾದಿಂದ ನಾನು ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ 20 ಸಾವಿರ ಜಿಸಿಬಿ ಖರೀದಿಸಿ ಭಯೋತ್ಪಾದನೆ ಮಟ್ಟ ಹಾಕುತ್ತೇನೆ’ ಎಂದಾಗ ಸೇರಿದ ಜನರು ಕೇಕೇ ಹಾಕಿ ಸಂಭ್ರಮಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಶೇರೆವಾಡ, ಬಿಜೆಪಿ ಮುಖಂಡರಾದ ನಾಗರಾಜ ಛಬ್ಬಿ, ಕಿರಣ್ ಪಾಟೀಲ್ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ರಾಜು.ಆರ್.ಕಲಘಟಗಿ, ಈರಣ್ಣ ಜಡಿ, ಮಾತೇಶ ತಹಶೀಲ್ದಾರ್‌, ಬಸವಣ್ಣಯ್ಯ ಹಿರೇಮಠ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.