ADVERTISEMENT

ಸಬ್‌ ಜೈಲು ಆವರಣದಲ್ಲಿ ರೌಡಿ ಕಾಳಗ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 19:35 IST
Last Updated 20 ಜೂನ್ 2019, 19:35 IST
ಹುಬ್ಬಳ್ಳಿ ಸಬ್‌ಜೈಲು ಆವರಣದಲ್ಲಿ ನಡೆದ ರೌಡಿಕಾಳಗದಲ್ಲಿ ಭಾಗವಹಿಸಿದ್ದ ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದರು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಸಬ್‌ಜೈಲು ಆವರಣದಲ್ಲಿ ನಡೆದ ರೌಡಿಕಾಳಗದಲ್ಲಿ ಭಾಗವಹಿಸಿದ್ದ ಆರೋಪಿಗಳನ್ನು ಅಶೋಕನಗರ ಠಾಣೆ ಪೊಲೀಸರು ಗುರುವಾರ ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಇಲ್ಲಿನ ವಿಶ್ವೇಶ್ವರನಗರದ ಸಬ್‌ ಜೈಲು ಆವರಣದಲ್ಲಿ ಬುಧವಾರ ನಡೆದ ರೌಡಿ ಕಾಳಗಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ಇನ್ನೂ 11ಕ್ಕೂ ಹೆಚ್ಚು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ವ್ಯಾಪಕ ಶೋಧ ನಡೆದಿದೆ.

ಸೆಟ್ಲಮೆಂಟ್‌ ಮೂರನೇ ಕ್ರಾಸ್‌ ನಿವಾಸಿ ಗಣೇಶ ಶ್ಯಾಮ್‌ ಜಾದವ್‌ (19), ಎಸ್‌.ಎಂ.ಕೃಷ್ಣ ನಗರದ ಅಶ್ವತ್ಥ್‌ ಬಸವರಾಜ ಮಡಿವಾಳರ (22), ಈಶ್ವರ ನಗರದ ದೀಪಕ್‌ ರಾಜು ಚಲವಾದಿ (19), ವೀರೇಂದ್ರ ವೆಂಕಟೇಶ ತಡ್ಕಾಲ್‌ (18) ಮತ್ತು ಗಿರಣಿ ಚಾಳದ ಜಸ್ವಂತ್‌ ಗುರುನಾಥ್‌ ಗಂಡಾಳ (22) ಬಂಧಿತ ಆರೋಪಿಗಳು.

ಗದಗ ರಸ್ತೆಯ ಹೊಲವೊಂದರಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನು ಅಶೋಕ ನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಮನಿ ಮತ್ತು ಸಿಬ್ಬಂದಿ ಬಂಧಿಸಿದ್ದಾರೆ. ಆರೋಪಿಗಳಿಂದ ಮೂರು ಆಟೊ ರಿಕ್ಷಾ, ಎರಡು ಬೈಕ್‌, ಎರಡು ತಲವಾರ್‌ ಮತ್ತು ಚಾಕು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಗಣೇಶ ಜಾದವ್‌ ಬಿಟ್ಟು ಇತರ ಮುಖ್ಯ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.

ADVERTISEMENT

ಪ್ರಕರಣದ ಹಿನ್ನೆಲೆ:ಜೂನ್‌ 7ರಂದು ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ನೇಕಾರ ನಗರದ ರಾಘವೇಂದ್ರ ಸರ್ಕಲ್‌ನಲ್ಲಿ ರೌಡಿ ಶೀಟರ್‌ ಶ್ಯಾಮ್‌ ಜಾಧವ ಗ್ಯಾಂಗಿಗೆ ಸೇರಿದ ಹುಸೇನ್‌ ಬಿಜಾಪುರಿ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು. ಈ ಕುರಿತು ಕಸಬಾಪೇಟೆ ಪೊಲೀಸರು ರೌಡಿ ಗಿರೀಶ ಮಹಾಂತ ಶೆಟ್ಟರ್‌ ಸೇರಿ ಐವರನ್ನು ಬಂಧಿಸಿದ್ದರು.

ಈ ಪ್ರಕರಣದ ವಿಚಾರಣೆ ಬುಧವಾರ ಕೋರ್ಟ್‌ನಲ್ಲಿ ಇತ್ತು. ಜೈಲಿನಲ್ಲಿರುವ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ, ಮರಳಿ ಜೈಲಿಗೆ ಕರೆದೊಯ್ಯಲಾಗಿತ್ತು. ಆರೋಪಿಗಳಿಗೆ ಊಟ ಕೊಡಲು ರವಿ ಮತ್ತು ಆತನ ಸ್ನೇಹಿತರು ಜೈಲಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಹೊಂಚುಹಾಕಿ ಕುಳಿತಿದ್ದ ಜಾಧವ್‌ ಗ್ಯಾಂಗಿನವರು, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು.

ದಾಳಿ ವೇಳೆ ಗಿರಿ ಕಡೆಯವರು ತಪ್ಪಿಸಿಕೊಂಡು ಅಲ್ಲಿಯೇ ಸಮೀಪ ಇರುವ ಪೊಲೀಸ್‌ ಕ್ವಾಟರ್ಸ್‌ನಲ್ಲಿ ಅವಿತುಕೊಂಡಿದ್ದರು. ಇನ್ನು ಕೆಲವರು ನೃಪತುಂಗ ಬೆಟ್ಟದತ್ತ ಓಡಿ ಹೋಗಿ ತಪ್ಪಿಸಿಕೊಂಡಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜುನೇದ ಮುಲ್ಲಾನನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಆರೋಪಿಗಳು, ಗಿರಿ ಕಡೆಯವರ ಕಾರಿನ ಗಾಜು ಒಡೆದಿದ್ದರು.

ಬಿಗಿ ಭದ್ರತೆ:ಬುಧವಾರದ ಘಟನೆ ಕಾರಣಕ್ಕೆ ಸಬ್‌ ಜೈಲು ವ್ಯಾಪ್ತಿಯಲ್ಲಿ ಗುರುವಾರ ಪೊಲೀಸರು ಬಿಗಿ ಭದ್ರತೆ ಇತ್ತು. ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳನ್ನು ನೋಡಲು, ಊಟ ಕೊಡಲು ಬರುವವರನ್ನು ತಪಾಸಣೆಗೆ ಒಳಪಡಿಸಿ ಜೈಲಿನ ಆವರಣಕ್ಕೆ ಬಿಡಲಾಯಿತು. ಸಬ್‌ ಜೈಲು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು.

ಸಿಸಿಟಿವಿ ಕ್ಯಾಮೆರಾ ಇಲ್ಲ:ಜೈಲು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸದೇ ಇರುವ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅತಿ ಸೂಕ್ಷ್ಮ ಪ್ರದೇಶವಾದ ಜೈಲಿಗೆ ಹೊಂದಿಕೊಂಡಂತೆ ಅನೇಕ ವಸತಿ ಸಮುಚ್ಛಯಗಳಿವೆ. ಜೈಲು ಸಮೀಪ ಇರುವ ಮುಖ್ಯ ರಸ್ತೆಗಳಲ್ಲಿ ಹಗಲು, ರಾತ್ರಿ ನಿತ್ಯ ಸಾವಿರಾರು ಜನ, ವಾಹನಗಳು ಸಂಚರಿಸುತ್ತವೆ. ತಕ್ಷಣ ಸಬ್‌ಜೈಲು ಮುಖ್ಯರಸ್ತೆ ಮತ್ತು ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.