ಹುಬ್ಬಳ್ಳಿ: ಇಲ್ಲಿನ ನವೀನ್ ಪಾರ್ಕ್‌ನ ಕರ್ಣಾಟಕ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಇಟ್ಟು ₹14.53 ಲಕ್ಷ ಸಾಲ ಪಡೆದಿದ್ದ ಐವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣ ಇಟ್ಟು ಹೇಮಲತಾ ಹಲಕುರ್ಣಿ ₹4.39 ಲಕ್ಷ, ಪ್ರಕಾಶ ಕಾಟ್ವಾ ₹6.56 ಲಕ್ಷ, ಮಂಜುನಾಥ ಹಲಕುರ್ಣಿ ₹1.95 ಲಕ್ಷ, ಶಿವರಾಜ ರಜಪೂತ ₹1.63 ಲಕ್ಷ ಸಾಲ ಪಡೆದಿದ್ದರು.
ಇವರು ಬ್ಯಾಂಕ್‌ನಲ್ಲಿಟ್ಟ ಚಿನ್ನಾಭರಣ ಅಸಲಿ ಇದೆ ಎಂದು ವ್ಯಾಪಾರಿ ಕುಂದನ್ ವರ್ಣೇಕರ್ ಹೇಳಿದ್ದರು. ಬ್ಯಾಂಕ್ ಉದ್ಯೋಗಿ ಪ್ರವೀಣಕುಮಾರ್ ಅವರು ಬೇರೊಂದು ಆಭರಣ ಮಳಿಗೆಯಲ್ಲಿ ಅಡವಿಟ್ಟ ಚಿನ್ನವನ್ನು ಪರಿಶೀಲನೆ ಮಾಡಿಸಿದಾಗ ನಕಲಿ ಚಿನ್ನವೆಂದು ಗೊತ್ತಾಗಿದೆ. ನಕಲಿ ಚಿನ್ನಾಭರಣವನ್ನು ಅಸಲಿ ಎಂದು ಸುಳ್ಳು ಹೇಳಿದ ಕುಂದನ್ ಸೇರಿದಂತೆ ಐವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೈಲಿನಲ್ಲಿ ₹1.84 ಲಕ್ಷ ಮೌಲ್ಯದ ವಸ್ತು ಕಳವು: ಫಂಡರಪುರ– ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ (16546) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಚಿನ್ನಾಭರಣ, ನಗದು, ಮೊಬೈಲ್ ಫೋನ್ ಸೇರಿ ₹1.84 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ದೋಚಿದ್ದಾರೆ.
ಬೆಂಗಳೂರು ಮೂಲದ ರೇಖಾ ಅವರು ವಿಜಯಪುರ ರೈಲು ನಿಲ್ದಾಣದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಫಂಡರಪುರ– ಮೈಸೂರು ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೊರಟಿದ್ದರು. ರಾತ್ರಿ ವೇಳೆ ಇವರು ಮಲಗಿದ್ದಾಗ ₹1.06 ಲಕ್ಷ ಮೌಲ್ಯದ ಕಿವಿಯೋಲೆ, ₹53 ಸಾವಿರ ಮೌಲ್ಯದ ಚಿನ್ನದ ಮಾಟಿ, ₹15 ಸಾವಿರ ಬೆಲೆಯ ಮೊಬೈಲ್ ಫೋನ್, ₹10 ಸಾವಿರ ನಗದು ಸೇರಿದಂತೆ ₹1.84 ಲಕ್ಷದ ವಸ್ತುಗಳಿದ್ದ ವ್ಯಾನಿಗ್ ಬ್ಯಾಗ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾರ್ಟ್ ಸರ್ಕಿಟ್; ದಾಬಾ, ಅಂಗಡಿಗಳಿಗೆ ಬೆಂಕಿ: ನಗರ ಹೊರವಲಯದ ಬುಡರಸಿಂಗಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ರಾಜಸ್ತಾನ ದಾಬಾದಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ದಾಬಾ ಹಾಗೂ ಸುತ್ತಮುತ್ತಲಿನ ಅಂಗಡಿಗಳು ಸುಟ್ಟ ಘಟನೆ ಬುಧವಾರ ನಡೆದಿದೆ.
ಸ್ಥಳೀಯರ ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.