
ಹಣ
ಹುಬ್ಬಳ್ಳಿ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಸೋಗಿನಲ್ಲಿ ಮೂರು ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಇಡಿ ಅಧಿಕಾರಿಗಳು ಎಂದು ಹೇಳಿಕೊಂಡ ಐವರ ತಂಡ, ಕೇರಳ ಮೂಲದ ಚಿನ್ನಾಭರಣ ವ್ಯಾಪಾರಿಯನ್ನು ವಿಚಾರಣೆ ನಡೆಸುವ ನೆಪದಲ್ಲಿ, 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ ₹2 ಲಕ್ಷ ನಗದು ದೋಚಿದೆ. ನಗರದ ಚನ್ನಮ್ಮ ವೃತ್ತದ ಬಳಿಯ ನೀಲಿಜಿನ್ ರಸ್ತೆಯಲ್ಲಿ ಕಳೆದ ಗುರುವಾರ ಘಟನೆ ನಡೆದಿದೆ.
ವ್ಯಾಪಾರಿ ಸುದೀನ್ ಎಂ.ಆರ್ ಅವರು ಚಿನ್ನಾಭರಣ ಅಂಗಡಿಗಳಿಗೆ ಆಭರಣ ಪೂರೈಸುವ ವ್ಯವಹಾರ ಮಾಡುತ್ತಿದ್ದರು. ನ. 15 ರಂದು ಮಂಗಳೂರಿನಿಂದ ಬೆಳಗಾವಿಗೆ ಕೆಲಸಗಾರ ವಿವೇಕ ಅವರ ಜತೆ ಬರುವಾಗ ಚೈನ್, ಬ್ರೆಸ್ಲೆಟ್, ಉಂಗುರ, ಕಿವಿಯೋಲೆ, ನೆಕ್ಲೆಸ್, ಲಾಕೆಟ್, ಬಳೆ ಸೇರಿ ಒಟ್ಟು ₹3.2 ಕೋಟಿ ಮೌಲ್ಯದ ಆಭರಣಗಳನ್ನು ತಂದಿದ್ದರು. ಬೆಳಗಾವಿ, ಧಾರವಾಡ, ಹುಬ್ಬಳ್ಳಿಯಲ್ಲಿರುವ ವಿವಿಧ ಆಭರಣ ಮಳಿಗೆಗಳಿಗೆ ತೆರಳಿ, ಆರ್ಡರ್‌ಗಳನ್ನು ಪಡೆದಿದ್ದರು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಎದುರಿನ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು.
ನ. 19ರಂದು ಧಾರವಾಡಕ್ಕೆ ಹೋಗಿ ಹೋಟೆಲ್‌ಗೆ ವಾಪಸ್ ಬರುವಾಗ ನೀಲಿಜಿನ್ ರಸ್ತೆಯಲ್ಲಿ ಅವರನ್ನು ತಡೆದ ಐದು ಮಂದಿಯ ತಂಡ, ಇಡಿ ಅಧಿಕಾರಿಗಳು ಎಂದು ಹಿಂದಿಯಲ್ಲಿ ಮಾತನಾಡಿ, ಗುರುತಿನ ಪತ್ರ ತೋರಿಸಿ ವಿಚಾರಣೆಗೆ ಕಚೇರಿಗೆ ಬನ್ನಿ ಎಂದು ಕಾರಿನಲ್ಲಿ ಕರೆದುಕೊಂಡು ಹೋಗಿದೆ. ಆ ವೇಳೆ ಚಿನ್ನಾಭರಣಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ ಎಂದು ಸುದೀನ್ ಅವರನ್ನು ಬೆದರಿಸಿ, ಅವರ ಮೊಬೈಲ್ ಫೋನ್ ಪಡೆದು ಸಿಮ್ ತೆಗೆದಿದ್ದಾರೆ. ನಂತರ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವಿದ್ದ ಬ್ಯಾಗ್ ಕಿತ್ತುಕೊಂಡಿದ್ದಾರೆ.
ಆರೋಪಿಗಳು ಬೆಳಗಾವಿಯ ಕಿತ್ತೂರು ಸಮೀಪ ಕೆಲಸಗಾರ ವಿವೇಕ ಅವರನ್ನು ಇಳಿಸಿದ್ದಾರೆ. ನಂತರ, ಸುದೀನ ಅವರನ್ನು ಎಂ.ಕೆ. ಹುಬ್ಬಳ್ಳಿ ರಸ್ತೆಗೆ ಕರೆದೊಯ್ದು ಮಾರ್ಗ ಮಧ್ಯೆ ಬಿಟ್ಟು ನಗದು ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ಧಾರೆ ದೂರಿನಲ್ಲಿ ತಿಳಿಸಲಾಗಿದೆ.
‘ವ್ಯಾಪಾರಿಗೆ ಗೊತ್ತಿರುವ ವ್ಯಕ್ತಿಗಳೇ ಚಿನ್ನಾಭರಣ, ನಗದು ದೋಚಿರುವ ಅನುಮಾನವಿದೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.