ADVERTISEMENT

ಹುಬ್ಬಳ್ಳಿ: ಜಿಲ್ಲೆಯಲ್ಲಿ 97,629 ಹೆಕ್ಟೇರ್‌ ಬೆಳೆ ಹಾನಿ

ಆಗಸ್ಟ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ: ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ

ಗೌರಮ್ಮ ಕಟ್ಟಿಮನಿ
Published 18 ಅಕ್ಟೋಬರ್ 2025, 5:10 IST
Last Updated 18 ಅಕ್ಟೋಬರ್ 2025, 5:10 IST
<div class="paragraphs"><p>ಆಗಸ್ಟ್‌ನಲ್ಲಿ ಸುರಿದ ಮಳೆಗೆ ಶಿರಗುಪ್ಪಿಯ ಹೊಲವೊಂದರಲ್ಲಿ ನೀರು ನಿಂತು ಬೆಳೆ ಹಾನಿಯಾಗಿತ್ತು</p></div>

ಆಗಸ್ಟ್‌ನಲ್ಲಿ ಸುರಿದ ಮಳೆಗೆ ಶಿರಗುಪ್ಪಿಯ ಹೊಲವೊಂದರಲ್ಲಿ ನೀರು ನಿಂತು ಬೆಳೆ ಹಾನಿಯಾಗಿತ್ತು

   

ಸಂಗ್ರಹ ಚಿತ್ರ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಆಗಸ್ಟ್‌ನಲ್ಲಿ ಸುರಿದ ಅಧಿಕ ಮಳೆಯಿಂದಾದ ಬೆಳೆಹಾನಿ ಕುರಿತು ಕೈಗೊಂಡ ಜಂಟಿ ಸಮೀಕ್ಷೆ ಪೂರ್ಣಗೊಂಡಿದೆ. 1.13 ಲಕ್ಷ ರೈತರ ಒಟ್ಟು 97,629.6 ಹೆಕ್ಟೇರ್‌ ಬೆಳೆಹಾನಿಯಾಗಿದ್ದು, ಅಂದಾಜು ₹85 ಕೋಟಿ ಪರಿಹಾರಧನ ಬಿಡುಗಡೆ ಆಗಬೇಕಿದೆ. ರೈತರು ಅದಕ್ಕಾಗಿ ಎದುರು ನೋಡುತ್ತಿದ್ದಾರೆ.

ADVERTISEMENT

ಆ.20ರಿಂದ 30ರವರೆಗೆ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳು ಜಂಟಿ ಸಮೀಕ್ಷೆ ಕೈಗೊಂಡಿದ್ದು, ಸೆಪ್ಟೆಂಬರ್‌ ಮೊದಲ ವಾರದಲ್ಲಿ ವರದಿ ಸಲ್ಲಿಸಿವೆ. ವರದಿಯಂತೆ ನವಲಗುಂದ ತಾಲ್ಲೂಕಿನಲ್ಲಿ ಅತೀ ಹೆಚ್ಚು 31,613 ರೈತರ 27,274 ಹೆಕ್ಟೇರ್‌ ಹಾಗೂ ಕಡಿಮೆ ಹುಬ್ಬಳ್ಳಿ ನಗರದ 1,683 ರೈತರ 1,352 ಹೆಕ್ಟೇರ್‌ ಬೆಳೆಹಾನಿಯಾಗಿದೆ.

ಧಾರವಾಡದಲ್ಲಿ 21,046 ರೈತರ 17,472 ಹೆಕ್ಟೇರ್, ಹುಬ್ಬಳ್ಳಿ ತಾಲ್ಲೂಕಿನಲ್ಲಿ 16,358 ರೈತರ 18,172 ಹೆಕ್ಟೇರ್‌, ಅಣ್ಣಿಗೇರಿ 17,815ರೈತರ 16,023 ಹೆಕ್ಟೇರ್ ಹಾಗೂ ಕುಂದಗೋಳ ತಾಲ್ಲೂಕಿನ 20,804 ರೈತರ 14,961 ಹೆಕ್ಟೇರ್‌ ಪ್ರದೇಶ ಬೆಳೆಹಾನಿಯಾಗಿದೆ. ಕಲಘಟಗಿ ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ ಬೆಳೆ ಹಾನಿಯಾಗಿಲ್ಲ.  

ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ನಷ್ಟ ಅನುಭವಿಸಿದವರಲ್ಲಿ ಒಟ್ಟು28,817 ರೈತರು ಬೆಳೆವಿಮೆಗೆ ಅರ್ಜಿ ಸಲ್ಲಿಸಿದ್ದಾರೆ. 

’ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ 105ರಷ್ಟು ಹೆಚ್ಚಿನ ಮಳೆ ಸುರಿದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್‌ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ ₹8,500 ಪರಿಹಾರ ಧನ ನೀಡಲಾಗುತ್ತದೆ. ಒಬ್ಬ ರೈತರಿಗೆ ಗರಿಷ್ಠ 2 ಹೆಕ್ಟೇರ್ ಅಥವಾ 5 ಎಕರೆವರೆಗೆ ಪರಿಹಾರ ಧನ ವಿತರಿಸಲಾಗುವುದು’ ಎಂದು ಹುಬ್ಬಳ್ಳಿ ತಾಲ್ಲೂಕಿನ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ತೆಂಬದ ’ಪ್ರಜಾವಾಣಿ’ ಗೆ ತಿಳಿಸಿದರು.

’ಆಗಸ್ಟ್‌ನಲ್ಲಿ ಹೆಸರು ಕಟಾವಿನ ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ 3 ಎಕರೆ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿದ್ದಾರೆ. ದೀಪಾವಳಿಗೂ ಮುನ್ನವೇ ಬೆಳೆಹಾನಿ ಪರಿಹಾರ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎನ್ನುತ್ತಾರೆ ಹೆಬ್ಬಳ್ಳಿಯ ರೈತ ಕಲ್ಮೇಶ್.

ಜಿಲ್ಲೆಯಾದ್ಯಂತ ಬೆಳೆಹಾನಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು ಪರಿಹಾರಧನ ಬಿಡುಗಡೆಯಾಗಬೇಕಿದೆ
ಮಂಜುನಾಥ ಅಂತರವಳ್ಳಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಧಾರವಾಡ
ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ನಷ್ಟ ಅನುಭವಿಸಿದ ರೈತರಿಗೆ ಅಂದಾಜು ₹85 ಕೋಟಿ ಪರಿಹಾರಧನ ನೀಡಬೇಕಿದೆ. ವಾರದೊಳಗೆ ಪರಿಹಾರಧನ ಬಿಡುಗಡೆ ಮಾಡಲಾಗುವುದು
ದಿವ್ಯಪ್ರಭು ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.