ADVERTISEMENT

ಹುಬ್ಬಳ್ಳಿ| ಸೈಕ್ಲಿಂಗ್‌ನಲ್ಲಿ ‘ಸ್ವಯಂ’ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯ ಗುರಿ

ಸತೀಶ ಬಿ.
Published 9 ಆಗಸ್ಟ್ 2025, 5:06 IST
Last Updated 9 ಆಗಸ್ಟ್ 2025, 5:06 IST
ಸ್ವಯಂ ಕಠಾರೆ
ಸ್ವಯಂ ಕಠಾರೆ   

ಹುಬ್ಬಳ್ಳಿ: ನಗರದ ಯುವ ಪ್ರತಿಭೆ ಸ್ವಯಂ ಕಠಾರೆ ಸೈಕ್ಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದು,  ಈ ಸ್ಪರ್ಧೆಯಲ್ಲಿ ಅವರು ಉನ್ನತ ಸಾಧನೆ ಮಾಡುವ ಕನಸು ಹೊತ್ತಿದ್ದಾರೆ.

ಧಾರವಾಡದ ಕೆ.ಸಿ ಪಾರ್ಕ್‌ನ ನಿವಾಸಿ ಸ್ವಯಂ, ರೋಡ್‌ ಸೈಕ್ಲಿಂಗ್ ಮತ್ತು ಟೈಮ್‌ ಟ್ರಯಲ್‌ ಸ್ಪರ್ಧೆಗಳಲ್ಲಿ  ಭಾಗವಹಿಸುತ್ತಾರೆ. ಧಾರವಾಡದ ಜೆಎಸ್‌ಎಸ್‌ ಕಾಲೇಜಿನ ವಿದ್ಯಾರ್ಥಿಯಾದ ಅವರು, ಬಿಎ ಅಂತಿಮ ವರ್ಷದ ಪರೀಕ್ಷೆ ಬರೆದಿದ್ದಾರೆ.

2022–23ರಲ್ಲಿ ಔರಂಗಾಬಾದ್‌ನ ಎಜಿಎಂ ವಿಶ್ವವಿದ್ಯಾಲಯ ಮತ್ತು 2023–24ರಲ್ಲಿ ಅಮೃತಸರದ ಗುರುನಾನಕದೇವ ವಿಶ್ವವಿದ್ಯಾಲಯದಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದ ರೋಡ್ ಸೈಕ್ಲಿಂಗ್ ಸ್ಪರ್ದೆಯಲ್ಲಿ (ತಂಡ ವಿಭಾಗ) ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದಾರೆ.

ADVERTISEMENT

ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್‌ನಿಂದ ಕಳೆದ ವರ್ಷ ನವೆಂಬರ್‌ನಲ್ಲಿ ಮೈಸೂರಿನಲ್ಲಿ ನಡೆದ 15ನೇ ರಾಜ್ಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನ 23 ವರ್ಷದೊಳಗಿನವರ ವಿಭಾಗದ 30 ಕಿ.ಮೀ ಟೈಮ್ ಟ್ರಯಲ್‌ನಲ್ಲಿ ಪಾರಮ್ಯ ಮೆರೆದಿದ್ದ ಅವರು, ಚಿನ್ನದ ಪದಕ ಗಳಿಸಿದ್ದಾರೆ.

2023, 2024 ಮತ್ತು ಪ್ರಸಕ್ತ ವರ್ಷ ಫೆಬ್ರುವರಿಯಲ್ಲಿ ನಡೆದ ಟ್ರಯಥ್ಲಾನ್‌ನಲ್ಲಿ ಉತ್ತಮ ಸಾಧನೆ ಮಾಡಿದ ಅವರು, ಹಲವು ರಾಜ್ಯಮಟ್ಟದ ಚಾಂಪಿಯನ್‌ಷಿಪ್‌ಗಳಲ್ಲೂ ಪದಕ ಮುಡಿಗೇರಿಸಿಕೊಂಡಿದ್ಧಾರೆ.

‘ಪ್ರಾಥಮಿಕ ಶಾಲೆಯಲ್ಲಿದ್ಧಾಗ ತರಗತಿಗಳು ತಡವಾಗಿ ಆರಂಭವಾಗುತ್ತಿದ್ದವು. ಆಗ ಹವ್ಯಾಸಕ್ಕಾಗಿ ಸೈಕ್ಲಿಂಗ್ ಮಾಡುತ್ತಿದ್ದೆ. ಪ್ರೌಢಶಾಲೆಯಲ್ಲಿದ್ದಾಗ ಬ್ಯಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದೆ’ ಎನ್ನುತ್ತಾರೆ ಸ್ವಯಂ ಕಠಾರೆ. 

‘2021ರಿಂದ ವೃತ್ತಿಪರ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ. ಸದಾನಂದ ಅಮರಾಪುರ, ಮುರುಗೇಶ ಚನ್ನಣ್ಣವರ, ಪಂಕಜ್‌ ರವಲು, ಗಗನ್‌ರೆಡ್ಡಿ, ಸಂದೀಪ್ ಪ್ರಭು ಅವರ ಬಳಿ ತರಬೇತಿ ಪಡೆದಿದ್ದೇನೆ. ಅನೇಕ ಹಿರಿಯ ಸೈಕ್ಲಿಸ್ಟ್‌ಗಳು, ಸ್ನೇಹಿತರು ಸೈಕಲ್‌ ಖರೀದಿ, ನ್ಯೂಟ್ರಿಷನ್‌ಗಾಗಿ ನೆರವು ನೀಡಿದ್ದಾರೆ’ ಎಂದರು.  

ಸದ್ಯ ವಾರಕ್ಕೆ 300 ಕಿ.ಮೀ ಸೈಕ್ಲಿಂಗ್‌ ಮಾಡುತ್ತೇನೆ. ಪದವಿ ನಂತರ ಓದು ಮುಂದುವರಿಸದೆ ಸೈಕ್ಲಿಂಗ್‌ಗೆ ಹೆಚ್ಚು ಸಮಯ ಮೀಸಲಿಡಲು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.

ಸ್ವಯಂ ಕಠಾರೆ
ಮುಂದಿನ ರಾಜ್ಯ ರಾಷ್ಟ್ರಮಟ್ಟದ ಚಾಂಪಿಯನ್‌ಷಿಪ್‌ಗಾಗಿ ಸಿದ್ಧತೆ ನಡೆಸಿರುವೆ. ₹12 ಲಕ್ಷ ಮೊತ್ತದ ಸೈಕಲ್ ಖರೀದಿಸುತ್ತಿದ್ದೇನೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಪದಕ ಗೆಲ್ಲುವುದು ನನ್ನ ಗುರಿ
ಸ್ವಯಂ ಕಠಾರೆ ಸೈಕ್ಲಿಸ್ಟ್‌
ಸ್ವಯಂ ಕಠಾರೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ಉನ್ನತ ತರಬೇತಿ ಸಿಕ್ಕರೆ ಅಂತರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡುತ್ತಾರೆ
ಡಾ.ಸಂದೀಪ್ ಪ್ರಭು ಹಿರಿಯ ಸೈಕ್ಲಿಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.