ADVERTISEMENT

ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ

ರಸ್ತೆ ಮೇಲೆ ಅಂಗಡಿ ನಡೆಸುತ್ತಿದ್ದವರಿಗೆ ಪಾಲಿಕೆಯಿಂದ ಬಿಸಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 16:37 IST
Last Updated 4 ಮಾರ್ಚ್ 2021, 16:37 IST
ಹುಬ್ಬಳ್ಳಿಯ ಕಲಾದಗಿ ಓಣಿಯಲ್ಲಿ ಗುರುವಾರ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು
ಹುಬ್ಬಳ್ಳಿಯ ಕಲಾದಗಿ ಓಣಿಯಲ್ಲಿ ಗುರುವಾರ ಅನಧಿಕೃತ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲಾಯಿತು   

ಹುಬ್ಬಳ್ಳಿ: ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ತೊಡಕಾಗಿದ್ದ ನಗರದ ಕಲಾದಗಿ ಓಣಿ ಮತ್ತು ದುರ್ಗದ ಬೈಲ್‌ ಮಾರುಕಟ್ಟೆ ಪ್ರದೇಶದಲ್ಲಿದ್ದ ಅನಧಿಕೃತ ಡಬ್ಬಾ ಅಂಗಡಿಗಳನ್ನು ಗುರುವಾರ ಮಹಾನಗರ ಪಾಲಿಕೆ ವತಿಯಿಂದ ತೆರವು ಮಾಡಲಾಯಿತು.

ರಸ್ತೆ ಮೇಲೆ ತಿಂಡಿ, ತಿನಿಸುಗಳನ್ನು ಮಾರಾಟಕ್ಕೆ ಇಟ್ಟಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇವುಗಳನ್ನು ತೆರವುಗೊಳಿಸುವಂತೆ ಪಾಲಿಕೆ ಅಧಿಕಾರಿಗಳು ಸೂಚಿಸಿದರೂ ಕೆಲವರು ತೆರವು ಮಾಡಿರಲಿಲ್ಲ. ಆದ್ದರಿಂದ ಪೊಲೀಸರ ಸಹಕಾರದೊಂದಿಗೆ ಡಬ್ಬಾ ಅಂಗಡಿಗಳನ್ನು ತೆರವು ಮಾಡಲಾಯಿತು. ಕಲಾದಗಿ ಓಣಿಯಲ್ಲಿ ಬಹಳಷ್ಟು ಅಂಗಡಿಗಳು ರಸ್ತೆ ಮೇಲಿದ್ದವು. ಕೆಲವೆಡೆ ಮಾಲೀಕರು ಬಾರದ ಕಾರಣ ಡಬ್ಬಾ ಅಂಗಡಿಗಳನ್ನು ವಶಕ್ಕೆ ಪಡೆಯಲಾಯಿತು.

ದುರ್ಗದ ಬೈಲ್‌ನ ಆಟೊ ನಿಲ್ದಾಣದ ಹಿಂಭಾಗದ ಸಾಲಿನಲ್ಲಿದ್ದ ಚಪ್ಪಲಿ ಹಾಗೂ ತಿನಿಸಿನ ಅಂಗಡಿಗಳನ್ನು ತೆರವು ಮಾಡಿ ಮಾಲೀಕರಿಗೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಡಬ್ಬಾ ಅಂಗಡಿ ಇಟ್ಟುಕೊಂಡರೂ ಪಾಲಿಕೆಯ ಜಾಗ ಅತಿಕ್ರಮಣ ಮಾಡಲಾಗಿದೆ. ಸ್ವಚ್ಛತೆಯನ್ನೂ ಕಾಪಾಡಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ‘ನಾಲ್ಕು ದಶಕಗಳಿಂದ ಇಲ್ಲಿ ಹಲವಾರು ಜನ ವಹಿವಾಟಿನಲ್ಲಿ ತೊಡಗಿದ್ದು, ಯಾರೂ ತೊಂದರೆ ಕೊಟ್ಟಿರಲಿಲ್ಲ. ಪಾಲಿಕೆ ಅಧಿಕಾರಿಗಳು ಮೊದಲು ನೋಟಿಸ್ ನೀಡಿ ಕಾರ್ಯಾಚರಣೆ ನಡೆಸಬೇಕಿತ್ತು. ಡಬ್ಬಾ ಅಂಗಡಿಗಳನ್ನು ನೆಚ್ಚಿಕೊಂಡು ಹಲವಾರು ಜನ ಕೆಲಸ ಮಾಡುತ್ತಿದ್ದಾರೆ. ಅವರ ಪಾಡೇನು’ ಎಂದು ಪ್ರಶ್ನಿಸಿದರು.

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಅಂಗಡಿಗಳನ್ನು ಹೊಂದಿದ್ದವರು ಕೂಡ ರಸ್ತೆ ಮೇಲೆ ಅನಧಿಕೃತವಾಗಿ ಎರಡ್ಮೂರು ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದರು. ಅನಧಿಕೃತ ಅಂಗಡಿಗಳನ್ನು ತೆರವು ಮಾಡಲು ಯಾವ ನೋಟಿಸ್‌ ಕೊಡುವ ಅಗತ್ಯವಿಲ್ಲ. ಇನ್ನು ಮುಂದೆ ವಾರಕ್ಕೊಂದು ಸಲ ತೆರವು ಕಾರ್ಯಾಚರಣೆ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.