ADVERTISEMENT

ದೈವಜ್ಞ ಬ್ರಾಹ್ಮಣ ಸಮುದಾಯಕ್ಕೆ ರಾಜಕೀಯ ಅವಕಾಶ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 5:47 IST
Last Updated 24 ಮಾರ್ಚ್ 2023, 5:47 IST

ಧಾರವಾಡ: ‘ರಾಜ್ಯದಲ್ಲಿ 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ದೈವಜ್ಞ ಬ್ರಾಹ್ಮಣ ಸಮುದಾಯ ಹಲವು ಮತಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ಹೊಂದಿದ್ದು, ಸಮುದಾಯದ ಆಕಾಂಕ್ಷಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡಬೇಕು’ ಎಂದು ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘದ ರಾಜ್ಯಾಧ್ಯಕ್ಷ ರವಿ ಗಾಂವಕರ್ ಆಗ್ರಹಿಸಿದರು.

‘ಕಾರವಾರ ಅಂಕೋಲಾ ಕ್ಷೇತ್ರದಿಂದ ಗಂಗಾಧರ ಭಟ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಕರಾವಳಿ ಭಾಗ, ಧಾರವಾಡ ಸೇರಿದಂತೆ ರಾಜ್ಯದ ಹಲವೆಡೆ ಸಮಾಜದ ಅರ್ಹ ಅಭ್ಯರ್ಥಿಗಳು ವಿವಿಧ ಪಕ್ಷಘಳ ಟಿಕೆಟ್‌ ಆಕಾಂಕ್ಷಿಗಳಾಗಿದ್ದು, ಯಾರಿಗೇ ಟಿಕೆಟ್‌ ಸಿಕ್ಕರೂ ಸಮಾಜದ ವತಿಯಿಂದ ಅವರನ್ನು ಬೆಂಬಲಿಸಲಾಗುವುದು. ಆ ಮೂಲಕ ವಿಧಾನಸಭೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಪ್ರತಿನಿಧಿ ಕಳುಹಿಸಲು ಶ್ರಮಿಸಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2013ರಿಂದ ಸುಮಾರು 11 ವರ್ಷಗಳ ಕಾಲ ರಾಮರಾವ ರಾಯಕರ ಅವರು ಸಂಘದ ಅಧ್ಯಕ್ಷರಾಗಿದ್ದರು. ಹೊನ್ನಾವರದ ಕರ್ಕಿಮಠದಲ್ಲಿ ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ ಉದ್ದಗಲಕ್ಕೂ ಸುತ್ತಾಡಿ ಸಂಘದ ಆಜೀವ ಸದಸ್ಯರ ನೋಂದಣಿಗೆ ಕ್ರಮ ವಹಿಸಲಾಗುವುದು’ ಎಂದು ರವಿ ಹೇಳಿದರು.

ADVERTISEMENT

‘ಚಿನ್ನ, ಬೆಳ್ಳಿ ಆಭರಣ ತಯಾರಿಸುವ ವೃತ್ತಿಯನ್ನೇ ನಂಬಿಕೊಂಡಿರುವ ಸಮಾಜದ ಕುಶಲಕರ್ಮಿಗಳು ಈಗ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಜತೆಗೆ ಪೊಲೀಸ್ ಕಿರುಕುಳವೂ ಹೆಚ್ಚಾಗಿದೆ. ಇವರಿಗೆ ಸೂಕ್ತ ಮಾರ್ಗೋಪಾಯ ಹಾಗೂ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಸಮಾಜವು ವಧುವರರ ಸಮಸ್ಯೆಯಿಂದಲೂ ಬಳಲುತ್ತಿದ್ದು, ಹಿರಿಯರ ಸಲಹೆಯಂತೆ ಇದಕ್ಕೆ ಪೂರಕ ಕೇಂದ್ರಗಳ ಸ್ಥಾಪನೆಗೆ ಗಂಭೀರ ಆಲೋಚನೆ ಮಾಡಲಾಗುವುದು’ ಎಂದರು.

‘ಸಮಾಜದ ಮಹಿಳೆಯರಿಗೆ ಶೈಕ್ಷಣಿಕ, ಲಘು ಉದ್ಯೋಗ ಸಂಬಂಧಿತ ಕೌಶಲಗಳ ಕುರಿತು ಕಾರ್ಯಕ್ರಮ ರೂಪಿಸಲಾಗುವುದು. ಬೆಂಗಳೂರಿನಲ್ಲಿ ರಾಜ್ಯ ಸಂಘದ ಹೆಸರಿನಲ್ಲಿರುವ 24ಸಾವಿರ ಚದರಡಿ ನಿವೇಶಣದಲ್ಲಿ ವಿದ್ಯಾರ್ಥಿ ನಿಲಯ, ಕಲ್ಯಾಣ ಮಂಟಪ ನಿರ್ಮಿಸುವ ಕುರಿತೂ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಮ್ಮ ಮುಂದಿನ ಯೋಜನೆಗಳ ಕುರಿತು ತಿಳಿಸಿದರು.

ಡಾ. ಉದಯ ರಾಯಕರ, ವಸಂತ ಅಣ್ವೇಕರ, ಸತ್ಯನಾರಾಯಣ ರಾಯಕರ, ಗಜಾನನ ಅಣವೇಕರ, ಅಚ್ಚಲದಾಸ ರೇವಣಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.