ಧಾರವಾಡ: ನಗರ ಸಹಿತ ಜಿಲ್ಲೆಯಾದ್ಯಂತ ವಿಜಯದಶಮಿಯನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು.
ಮನೆಗಳಲ್ಲಿ ಬೆಳಿಗ್ಗೆ ಪ್ರಾರ್ಥನೆ, ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಕುಟುಂಬ ವರ್ಗದವರು ಒಟ್ಟಿಗೆ ಸೇರಿ ಹಬ್ಬಕ್ಕಾಗಿ ಸಿದ್ಧಪಡಿಸಿದ ಖಾದ್ಯಗಳನ್ನು ಸವಿದರು.
ಮಕ್ಕಳು, ಯುವಕರು ಹಾಗೂ ಹಿರಿಯರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು. ಸಂಜೆ ಹೊಲಗಳಿಗೆ ತೆರಳಿ ಬನ್ನಿ ಎಲೆಗಳನ್ನು ತಂದರು. ಮನೆ ಜಗಲಿ ಮೇಲೆ ಸ್ಥಾಪಿಸಿದ ಘಟದ ಸಸಿಗಳನ್ನು ದೇವರಿಗೆ ಅರ್ಪಿಸಿ ಕುಟುಂಬದವರು, ಸ್ನೇಹಿತರು, ನೆರಹೊರೆಯವರಿಗೆ ಬನ್ನಿ ಎಲೆ ಕೊಟ್ಟು ಪರಸ್ಪರ ಶುಭಾಶಯ ಕೋರಿದರು.
ನಗರದ ಮರಾಠ ಕಾಲೊನಿಯ ದುರ್ಗಾದೇವಿ, ಶಾಂತಿನಿಕೇತನ ನಗರದ ಕರಿಯಮ್ಮ ದೇವಸ್ಥಾನ, ಸಾಯಿ ಮಂದಿರ, ನಗರೇಶ್ವರ ದೇವಸ್ಥಾನ, ಹನುಮಾನ ದೇವಸ್ಥಾನ ಸಹಿತ ವಿವಿಧ ದೇವಸ್ಥಾನಗಳಲ್ಲಿ ಭಕ್ತರು ಪೂಜೆ ಸಲ್ಲಿಸಿದರು.
ಜಂಬೂ ಸವಾರಿ ಸಡಗರ
ಧಾರವಾಡ ದಸರಾ ಜಂಬೂ ಸವಾರಿ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ದಸರಾ ಜಂಬೂ ಸವಾರಿ ಮೆರವಣಿಗೆ ಬುಧವಾರ ಸಂಭ್ರಮದಿಂದ ಜರುಗಿತು.
ಮಧ್ಯಾಹ್ನ ಬಂಡೆಮ್ಮ ದೇವಿಯ ದೇವಸ್ಥಾನದಲ್ಲಿ ದೇವಿ ಮೂರ್ತಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪನೆಗೊಳಿಸಿ ಪೂಜೆ ಸಲ್ಲಿಸಿಸಲಾಯಿತು. ಗಾಂಧಿನಗರದ ಈಶ್ವರ ದೇವಸ್ಥಾನದಲ್ಲಿ ಜಂಬೂ ಸವಾರಿ ಮೆರವಣಿಗೆ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಜಂಬೂ ಚಾಲನೆ ನೀಡಿದರು.
ಬಂಡೆಮ್ಮ ದೇವಿ ಮೂರ್ತಿಯ ಅಂಬಾರಿ ಹೊತ್ತ ಆನೆಗಳು ಮೆರವಣಿಗೆಯಲ್ಲಿ ಸಾಗಿದವು. ಸಾರೊಟು, ಡೊಳ್ಳು ಕುಣಿತ, ಹೆಜ್ಜೆ ಮೇಳ, ಕೋಲಾಟ, ಕೀಲು ಕುಣಿತ, ಯಕ್ಷಗಾನ ನೃತ್ಯ, ಕಂಸಾಳೆ, ಕುದುರೆ ಕುಣಿತ, ಚಂಡೆ, ಮದ್ದಳೆ ಹೀಗೆ ಸುಮಾರು 40 ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಜನರು ರಸ್ತೆಯುದ್ದಕ್ಕೂ ನಿಂತ ಜಂಬೂ ಸವಾರಿ ಕಣ್ಣತುಂಬಿಕೊಂಡರು.
ಗಾಂಧಿನಗರ, ವಿದ್ಯಾಗಿರಿ, ಹೊಸ ಯಲ್ಲಾಪುರ, ಕಾಮನಕಟ್ಟಿ, ಗಾಂಧಿ ಚೌಕ್, ಸುಭಾಷ ರಸ್ತೆ, ಆಝಾದ್ ಉದ್ಯಾನ ಮೂಲಕ ಕಲಾಭವನದವರೆಗೆ ಜಂಬೂಸವಾರಿ ಸಾಗಿ ಸಂಪನ್ನಗೊಂಡಿತು.
ಶಿರಹಟ್ಟಿಯ ಪಕೀರ ದಿಂಗಾಲೇಶ್ವರ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ಜ್ಯೋತಿ ಪ್ರಕಾಶ ಮಿರ್ಜಿ, ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ, ಮಾಜಿ ಶಾಸಕಿ ಸೀಮಾ ಮಸೂತಿ, ಕಾರ್ಯಾಧ್ಯಕ್ಷ ನಾರಾಯಣ ಕೋರ್ಪಡೆ, ಮಂಜುನಾಥಗೌಡ ಪಾಟೀಲ, ವಿಲಾಸ, ವಸಂತ, ಸುಭಾಸ ಮೋರೆ, ಮಡಿವಾಳೆಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.