ADVERTISEMENT

ರಾಯನಾಳ ಕೆರೆಯಲ್ಲಿ ಮೀನುಗಳ ಮಾರಣಹೋಮ

₹6 ಲಕ್ಷ ಮೌಲ್ಯದ ಮೀನುಗಳು ಮೃತ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 16:57 IST
Last Updated 27 ಜೂನ್ 2020, 16:57 IST
ಹುಬ್ಬಳ್ಳಿಯ ರಾಯನಾಳ ಕೆರೆ ನೀರಿಗೆ ವಿಷಕಾರಿ ಅಂಶ ಸೇರಿರುವುದರಿಂದ ಮೀನುಗಳು ಮೃತಪಟ್ಟಿರುವುದು
ಹುಬ್ಬಳ್ಳಿಯ ರಾಯನಾಳ ಕೆರೆ ನೀರಿಗೆ ವಿಷಕಾರಿ ಅಂಶ ಸೇರಿರುವುದರಿಂದ ಮೀನುಗಳು ಮೃತಪಟ್ಟಿರುವುದು   

ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಯನಾಳ ಹೊಸಕೆರೆಯಲ್ಲಿ ಶನಿವಾರ ಸಾವಿರಾರು ಮೀನುಗಳ ಮಾರಣಹೋಮ ನಡೆದಿದೆ. ಕೆರೆಯ ಸುತ್ತ ದಡದಲ್ಲಿ ಮೀನುಗಳು ತೇಲುತ್ತಿವೆ.

ಕೆರೆಗೆ ಯುಡಿಜಿಯ ರಾಸಾಯನಿಕ ಮಿಶ್ರಿತ ನೀರು ಸೇರಿದ್ದರಿಂದ ಮೀನುಗಳು ಮೃತಪಟ್ಟಿವೆ ಎಂದು ಮೀನು ಸಾಕಾಣಿಕೆ ಟೆಂಡರ್‌ ಪಡೆದಿರುವ ಹೊಸೂರ ನಿವಾಸಿ ಮಹಾದೇವ ಬಚ್ಚೋರಾಮ್‌ ಸೋಳಂಕಿ ಆರೋಪಿಸಿದರು.

ಮೀನು ಸಾಕಾಣಿಕೆ ಉದ್ದೇಶಕ್ಕೆ ಐದು ವರ್ಷಗಳ ಹಿಂದೆ ಮೀನುಗಾರಿಕೆ ಇಲಾಖೆಯ ಟೆಂಡರ್‌ ಪಡೆದಿದ್ದೆವು. 2019 ಜುಲೈನಲ್ಲಿ ರಘು,‌ ಮಿರ್ಗಲ್‌, ಕನ್ನಡಿ ಜಾತಿಯ 56 ಸಾವಿರ ಮೀನಿನ ಮರಿಗಳನ್ನು ಬಿಡಲಾಗಿತ್ತು. ಮೀನು ಹಿಡಿಯುವ ಹೊತ್ತಿಗೆ ಕೊರೊನಾ ಸೋಂಕು ವ್ಯಾಪಿಸಿತು. ಹಾಗಾಗಿ ಮೀನು ಹಿಡಿಯಲು ಆಗಲಿಲ್ಲ. ಒಂದೊಂದು ಮೀನು ಅರ್ಧ ಕೆ.ಜಿ. ತೂಗುತ್ತವೆ. ಈಗ ಅವುಗಳ ಮಾರಣ ಹೋಮದಿಂದ ಅಂದಾಜು ₹5ರಿಂದ ₹6 ಲಕ್ಷ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು. ಮೀನುಗಾರಿಕೆ ಇಲಾಖೆ ನಿರ್ದೇಶನದಂತೆ ಸುಣ್ಣ ಹಾಗೂ ಉಪ್ಪು ಹಾಕಲಾಗಿದೆ ಎಂದರು.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರಪಾಲಿಕೆ ಮಾಜಿ ಸದಸ್ಯ ಸತೀಶ್ ಹೊಂಗಲ್‌, ‘ರಾಯನಾಳ ಗ್ರಾಮ ಹಾಗೂ ಕೆರೆಯಿರುವ 142 ಎಕರೆ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಸೇರಿದೆ. ಆದರೂ ಗ್ರಾಮ ಪಂಚಾಯ್ತಿಯವರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಬಿಡುತ್ತಿಲ್ಲ. ಈ ಹಿಂದೆ ಕೆರೆಗೆ ಒಳಚರಂಡಿಯ ನೀರು ಸೇರುತ್ತಿತ್ತು. ಆದರೆ, ಇಂಥ ಯಾವುದೇ ಅನಾಹುತ ಆಗಿರಲಿಲ್ಲ. ಈಗ ಯುಜಿಡಿ ಕಾಮಗಾರಿ ಪೂರ್ಣವಾಗುವ ಹಂತದಲ್ಲಿದೆ. ಮೀನುಗಳ ಸಾವು ನಿಗೂಢವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.