ADVERTISEMENT

ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಾವು: ದಾಖಲಾಗದ 70 ಪ್ರಕರಣ

ಮೂರು ವರ್ಷದಲ್ಲಿ ಮೃತಪಟ್ಟವರು ಒಟ್ಟು 122

ನಾಗರಾಜ್ ಬಿ.ಎನ್‌.
Published 15 ಜೂನ್ 2025, 6:02 IST
Last Updated 15 ಜೂನ್ 2025, 6:02 IST
ಶಶಿಧರ ಕೋಸಂಬೆ
ಶಶಿಧರ ಕೋಸಂಬೆ   

ಹುಬ್ಬಳ್ಳಿ: ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಒಟ್ಟು 122 ವಿದ್ಯಾರ್ಥಿಗಳು ವಿವಿಧ ಕಾರಣಗಳಿಗೆ ಮೃತಪಟ್ಟಿದ್ದಾರೆ. ಈ ಸಂಬಂಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ 52 ಪ್ರಕರಣಗಳಷ್ಟೇ ದಾಖಲಾಗಿದ್ದು,  70 ಪ್ರಕರಣಗಳು ದಾಖಲಾಗಿಲ್ಲ. 

ದಾಖಲಾದ ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿದಿದೆ. ಆದರೆ, ದಾಖಲಾಗದ ಪ್ರಕರಣಗಳಲ್ಲಿ ವಿದ್ಯಾರ್ಥಿಗಳ ಸಾವಿಗೆ ಕಾರಣವೇನು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಕಾರ, ಅಪಘಾತ, ಆತ್ಮಹತ್ಯೆ ಮತ್ತು ಅನಾರೋಗ್ಯದಿಂದ ಮಕ್ಕಳು ಮೃತಪಟ್ಟಿದ್ದಾರೆ. ಅನಿವಾರ್ಯ ಕಾರಣಗಳಿಂದ ವಸತಿ ಶಾಲೆಯಿಂದ ಮನೆಗೆ ಬಂದಿದ್ದ 100 ವಿದ್ಯಾರ್ಥಿಗಳು 2022 ರಿಂದ 2024ರ ಅವಧಿಯಲ್ಲಿ ಮೃತಪಟ್ಟಿದ್ದಾರೆ. ವಸತಿ ಶಾಲೆಗಳಲ್ಲಿ 22 ಮಕ್ಕಳು ಸಾವನ್ನಪ್ಪಿದ್ದಾರೆ.

ADVERTISEMENT

ಕೌಟುಂಬಿಕ ಕಾರಣ, ಮಾನಸಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡ ಮಕ್ಕಳ ಸಂಖ್ಯೆ 12. ಆದರೆ, ದಾಖಲಾದ ಪ್ರಕರಣಗಳ ಸಂಖ್ಯೆ 10. ಆಕಸ್ಮಿಕ ಅಪಘಾತ ಮತ್ತು ರಸ್ತೆ ಅಪಘಾತದಲ್ಲಿ 37 ಮಕ್ಕಳು ಮೃತಪಟ್ಟಿದ್ದು, 32 ಪ್ರಕರಣಗಳಷ್ಟೇ ದಾಖಲಾಗಿವೆ. 73 ಮಕ್ಕಳು ಅನಾರೋಗ್ಯದ ಕಾರಣದಿಂದ ಮೃತಪಟ್ಟಿದ್ದು, ದಾಖಲಾದ ಪ್ರಕರಣ ಕೇವಲ 8.

ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಮೊರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ, ಅಟಲ್‌ ಬಿಹಾರ ವಾಜಪೇಯಿ, ಇಂದಿರಾಗಾಂಧಿ, ನಾರಾಯಣಗುರು, ಡಾ. ಬಿ.ಆರ್‌. ಅಂಬೇಡ್ಕರ್‌ ಬಾಲಕಿಯರ ವಸತಿ ಶಾಲೆ ಹೀಗೆ ಒಟ್ಟು 843 ವಸತಿ ಶಾಲೆಗಳಿವೆ.

‘ಬಡತನದ ಹಿನ್ನೆಲೆಯುಳ್ಳ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬುದು ವಸತಿ ಶಾಲೆಯ ಉದ್ದೇಶ. ಮೂಲ ಸೌಲಭ್ಯಗಳ ಕೊರತೆಯು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಬಾರದು. ಮಕ್ಕಳ ಆರೈಕೆ, ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳ ಬಗ್ಗೆ ಅಲ್ಲಿಯ ಶಿಕ್ಷಕರು ಹಾಗೂ ಸಂಬಂಧಪಟ್ಟವರು ಎಚ್ಚರಿಕೆಯಿಂದ ಇರಬೇಕು. ಪ್ರತಿಯೊಂದು ಮಗುವೂ ಬದುಕಬೇಕು. ಮಗು ಮೃತಪಟ್ಟರೆ, ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕಡ್ಡಾಯವಾಗಿ ದಾಖಲಾಗಬೇಕು’ ಎಂದು ಮಕ್ಕಳ ಹಕ್ಕು ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.

ವಸತಿ ಶಾಲೆಗಳಲ್ಲಿ ಊಟ ಮತ್ತು ವಸತಿ ಸಮಸ್ಯೆಗಳು ಇವೆ. ಸಿಸಿಟಿವಿ ಕ್ಯಾಮೆರಾ ಸೌಲಭ್ಯಗಳು ಇಲ್ಲದಿರುವುದು ಕೆಲ ಸಮಸ್ಯೆಗಳಿಗೆ ಕಾರಣವಾಗಿದೆ.
– ಶಶಿಧರ ಕೋಸಂಬೆ, ಸದಸ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ
ಮಕ್ಕಳು ಮೃತಪಟ್ಟಿರುವ ಕುರಿತು ಠಾಣೆಯಲ್ಲಿ ಪ್ರಕರಣಗಳು ದಾಖಲಾಗುತ್ತವೆ. ದಾಖಲಾಗದಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲಾಗುವುದು.
– ಕಾಂತರಾಜ, ಕಾರ್ಯನಿರ್ವಾಹಕ ನಿರ್ದೇಶಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.