ADVERTISEMENT

ಸಾಮಾನ್ಯ ಸಭೆಯಲ್ಲಿ ನಿರ್ಧಾರ: ಮೇಯರ್‌

ಈದ್ಗಾದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ; ಸಂಘಟನೆಗಳಿಂದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 16:06 IST
Last Updated 24 ಆಗಸ್ಟ್ 2022, 16:06 IST
ಹುಬ್ಬಳ್ಳಿ ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ ಪ್ರತಿಭಟನಾ ಧರಣಿ ನಡೆಸಿದ ಗಣೇಶೋತ್ಸವ ಸಮಿತಿ ಸದಸ್ಯರ ಜೊತೆ ಮೇಯರ್‌ ಈರೇಶ ಅಂಚಟಗೇರಿ ಚರ್ಚಿಸಿದರು /ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಮಹಾನಗರ ಪಾಲಿಕೆ ಆವರಣದಲ್ಲಿ ಬುಧವಾರ ಪ್ರತಿಭಟನಾ ಧರಣಿ ನಡೆಸಿದ ಗಣೇಶೋತ್ಸವ ಸಮಿತಿ ಸದಸ್ಯರ ಜೊತೆ ಮೇಯರ್‌ ಈರೇಶ ಅಂಚಟಗೇರಿ ಚರ್ಚಿಸಿದರು /ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದು, ಗುರುವಾರ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಮೇಯರ್‌ ಈರೇಶ ಅಂಚಟಗೇರಿ ಹೇಳಿದರು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಬುಧವಾರ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಗಜಾನನ ಮಹೋತ್ಸವ ಸಮಿತಿ ಸದಸ್ಯರಿಂದ ಮನವಿ ಸ್ವೀಕರಿಸಿ, ಮಾಧ್ಯಮದವರೊಂದಿಗೆ ಮಾತನಾಡಿದರು.

‘ಈದ್ಗಾದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವಂತೆ ನಾಲ್ಕು ಗಣೇಶೋತ್ಸವ ಸಮಿತಿಗಳು ಪಾಲಿಕೆಗೆ ಮನವಿ ಸಲ್ಲಿಸಿವೆ. ಆ ಕುರಿತು ಪಾಲಿಕೆ ಅಧಿಕಾರಿಗಳ ಜೊತೆ ಹಾಗೂ ಕಾನೂನು ತಜ್ಞರ ಜೊತೆ ಸಲಹೆ ಪಡೆಯಲಾಗಿದೆ. ಸಾಮಾನ್ಯ ಸಭೆಯಲ್ಲಿ ಹೆಚ್ಚಿನ ವಿಷಯವಾಗಿ ವಿಷಯ ಮಂಡಿಸಲು ಆಯುಕ್ತರಿಗೆ ಸೂಚಿಸಲಾಗಿದೆ. ಮೊದಲನೇ ಬಾರಿಗೆ ಅಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸುವ ವಿಷಯ ಆಗಿರುವುದರಿಂದ, ಸರ್ವ ಸದಸ್ಯರ ಅಭಿಪ್ರಾಯ ಮುಖ್ಯ. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಆಯುಕ್ತರು, ಮೇಯರ್‌ ಸೇರಿದಂತೆ ಎಲ್ಲರೂ ಬದ್ಧರಾಗಿರುತ್ತಾರೆ’ ಎಂದರು.

ADVERTISEMENT

ಭಜನೆ; ಧರಣಿ: ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ, ರಾಣಿಚನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿ ಹಾಗೂ ವಿವಿಧ ಗಜಾನನ ಮಹೋತ್ಸವ ಸಮಿತಿ ಸದಸ್ಯರು ಅನುಮತಿಗೆ ಆಗ್ರಹಿಸಿ ಪಾಲಿಕೆ ಆವರಣದಲ್ಲಿ ಧರಣಿ ಕುಳಿತು ಭಜನೆ ಮಾಡಿದರು. ಆಯುಕ್ತರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಘೋಷಣೆ ಕೂಗಿದರು. ಪ್ರತಿಭಟನಕಾರರ ಬಳಿ ಬಂದ ಮೇಯರ್‌ ಈರೇಶ ಅಂಚಟಗೇರಿ, ಅವರ ಜೊತೆಯೇ ಕುಳಿತು ಮನವಿ ಆಲಿಸಿದರು.

ಎಚ್ಚರಿಕೆ: ‘ಈಗಾಗಲೇ ಪಾಲಿಕೆಗೆ ಸಾಕಷ್ಟು ಬಾರಿ ಮನವಿ ನೀಡಲಾಗಿದೆ. ಆದರೆ, ಆಯುಕ್ತರು ಈದ್ಗಾ ಮೈದಾನವನ್ನು ವಿವಾದದ ಜಾಗ ಎಂದು ಹೇಳಿಕೆ ನೀಡಿದ್ದಾರೆ. 2010ರಲ್ಲಿಯೇ ವಿವಾದ ಬಗೆಹರಿದಿದ್ದು, ಕೂಡಲೇ ಅವರು ಕ್ಷಮೆಯಾಚಿಸಬೇಕು. ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸಬೇಕು ಎಂದು ತೀರ್ಮಾನಿಸಿದ್ದೇವೆ. ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದರೆ ಯಾವ ಕಾನೂನಾದರೂ ಮುರಿದು ಅಲ್ಲಿ ಉತ್ಸವ ಮಾಡುತ್ತೇವೆ. ಅವಕಾಶ ನೀಡದಿದ್ದರೆ,ಆ ಎರಡು ದಿನ ಸಹ ಪ್ರಾರ್ಥನೆ ಆಗದು. ಇದು ನಮ್ಮ ಎಚ್ಚರಿಕೆ’ ಎಂದು ರಾಣಿಚನ್ನಮ್ಮ ಮೈದಾನ ಗಣೇಶೋತ್ಸವ ಸಮಿತಿ ಮುಖಂಡ ಹನುಮಂತ ನಿರಂಜನ ಹೇಳಿದರು.

ರಾಘವೇಂದ್ರ ಕಟಾರೆ, ಸಂತೋಷ ಕಟಾರೆ, ಅಪ್ಪಾಸಾಬ್‌ ಕಟ್ಟಿ, ಅಣ್ಣಪ್ಪ ದೀವಟಗಿ, ಮಂಜು ಕಟಾರೆ, ಆನಂದ ಸಂಶಿಕರ, ಚಿದಾನಂದ ಗುಮ್ಮಗೋಳಮಠ ಇದ್ದರು.

‘ಎಲ್ಲರೂ ಬದ್ಧರಾಗಿರಬೇಕು’

‘ಈದ್ಗಾ ಮೈದಾನದ ವಿಷಯದಲ್ಲಿ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದ್ಯಾವುದಕ್ಕೂ ಅವಕಾಶ ನೀಡದೆ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು’ ಎಂದು ಮೇಯರ್‌ ಈರೇಶ ಅಂಚಟಗೇರಿ ಪ್ರತಿಭಟನಾಕಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.