ADVERTISEMENT

ಕೋಮುವಾದಿ ಪಕ್ಷವನ್ನು ಸೋಲಿಸಿ: ಅಬ್ದುಲ್‌

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 14:20 IST
Last Updated 19 ಏಪ್ರಿಲ್ 2019, 14:20 IST

ಹುಬ್ಬಳ್ಳಿ: ಹಿಂದಿನ ಐದು ವರ್ಷಗಳ ಅವಧಿಯಲ್ಲಿ ದಲಿತರು, ಮುಸ್ಲಿಮರು ದೇಶದಲ್ಲಿ ಸುರಕ್ಷಿತವಾಗಿಲ್ಲ. ಆದ್ದರಿಂದ ಕೋಮುವಾದಿ ಬಿಜೆಪಿಯನ್ನು ಈ ಬಾರಿ ಅಧಿಕಾರದಿಂದ ದೂರವಿಡಬೇಕು ಎಂದು ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಅಬ್ದುಲ್‌ ಖಾನ್‌ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ಷೇತ್ರದ ಬಿಜೆಪಿ ಸಂಸದ ಪ್ರಹ್ಲಾದ ಜೋಶಿ ನಾಲ್ಕೈದು ರಸ್ತೆಗಳನ್ನು ನಿರ್ಮಿಸಿ ಅದೇ ದೊಡ್ಡ ಸಾಧನೆ ಎನ್ನುವಂತೆ ಬೀಗುತ್ತಿದ್ದಾರೆ. ಅವರು ಏನೂ ಅಭಿವೃದ್ಧಿ ಕೆಲಸ ಮಾಡಿಲ್ಲ’ ಎಂದು ದೂರಿದರು.

‘ಅಲ್ಪ ಸಂಖ್ಯಾತರಿಗೆ ಕ್ಷೇತ್ರದ ಟಿಕೆಟ್ ‘ಕೈ’ ತಪ್ಪಿದ್ದಕ್ಕೆ ಸಮಾಜದ ಜನ ಅಸಮಾಧಾನಗೊಂಡಿದ್ದಾರೆ ಎನ್ನುವುದು ಸುಳ್ಳು. ಜೋಶಿಯನ್ನು ಸೋಲಿಸಲು ವಿನಯ ಕುಲಕರ್ಣಿ ಸರಿಯಾದ ಅಭ್ಯರ್ಥಿ ಎಂದು ಜಿಲ್ಲೆಯ ಅಲ್ಪಾಸಂಖ್ಯಾತ ಮುಖಂಡರೇ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದಿದ್ದರು’ ಎಂದರು.

ADVERTISEMENT

ಕಾಂಗ್ರೆಸ್‌ ಮುಖಂಡ ಅಲ್ತಾಫ್ ಕಿತ್ತೂರ ‘ಬಿಜೆಪಿಯವರು ಎಲ್ಲ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರಿಗೆ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಹಾಗಾದರೆ ಮೋದಿ ದೇಶದ ಎಲ್ಲ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದಾರೆಯೇ’ ಎಂದು ಪ್ರಶ್ನಿಸಿದರು. ಬಿಜೆಪಿಯವರು ಮೋದಿ ನೋಡಿ ಮತ ಕೊಡಿ ಎಂದರೆ, ನಾವು ಕ್ಷೇತ್ರದ ಅಭ್ಯರ್ಥಿ ನೋಡಿ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದೇವೆ ಎಂದರು.

ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಜಾಫರ್‌, ರಾಜ್ಯ ಉಪಾಧ್ಯಕ್ಷೆ ಫರೀದಾ ರೋಣದ, ಜೆಡಿಎಸ್‌ ಮುಖಂಡ ಎಂ. ಸಲೀಂ ಸಂಗನಮುಲ್ಲಾ, ಸೇವಾದಳದ ಅಧ್ಯಕ್ಷ ಮೋಹನ ಅರ್ಕಸಾಲಿ, ಬಶೀರ ಅಹ್ಮದ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.