ADVERTISEMENT

ರಾಷ್ಟ್ರಧ್ವಜ: ಮೊಟ್ಟೆ ಆಕಾರದಲ್ಲಿ ಅಶೋಕ ಚಕ್ರ, ಬಟ್ಟೆಗೆ ಬೇಕಾಬಿಟ್ಟಿ ಹೊಲಿಗೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 8:33 IST
Last Updated 10 ಆಗಸ್ಟ್ 2022, 8:33 IST
ಹುಬ್ಬಳ್ಳಿ ಅಂಚೆ ಕಚೇರಿಯಲ್ಲಿ ಮಾರಾಟಕ್ಕೆ ಇಡಲಾದ ಪಾಲಿಸ್ಟರ್‌ ಬಟ್ಟೆಯ ರಾಷ್ಟ್ರಧ್ವಜದ ಅಂಚಿಗೆ ಅಡ್ಡಾದಿಡ್ಡಿ ಹೊಲಿಗೆ ಹಾಕಿರುವುದು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಅಂಚೆ ಕಚೇರಿಯಲ್ಲಿ ಮಾರಾಟಕ್ಕೆ ಇಡಲಾದ ಪಾಲಿಸ್ಟರ್‌ ಬಟ್ಟೆಯ ರಾಷ್ಟ್ರಧ್ವಜದ ಅಂಚಿಗೆ ಅಡ್ಡಾದಿಡ್ಡಿ ಹೊಲಿಗೆ ಹಾಕಿರುವುದು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ‘ಮನೆ ಮನೆಯಲ್ಲಿ ತ್ರಿವರ್ಣಧ್ವಜ’ ಅಭಿಯಾನಕ್ಕಾಗಿ ಹುಬ್ಬಳ್ಳಿಯ ಪ್ರಧಾನ ಅಂಚೆ ಕಚೇರಿಹಾಗೂಉಪ ಅಂಚೆ ಕಚೇರಿಯಲ್ಲಿಸಾರ್ವಜನಿಕರಖರೀದಿಗೆಇಟ್ಟಿರುವ ಬಹುತೇಕ ರಾಷ್ಟ್ರಧ್ವಜಗಳನ್ನು ಮಾನದಂಡಕ್ಕೆ ವಿರುದ್ಧವಾಗಿ ಸಿದ್ಧಪಡಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

24 ಗೆರೆಯುಳ್ಳ ಅಶೋಕ ಚಕ್ರ ಬಿಳಿ ಬಣ್ಣದ ಮಧ್ಯ ಭಾಗದಲ್ಲಿ ಇರುವ ಬದಲು, ಎಡ ಅಥವಾ ಬಲ ಭಾಗದಲ್ಲಿ ಅಂಡಾಕಾರದಲ್ಲಿ ಅಚ್ಚಾಗಿದೆ.

ಕೆಸರಿ, ಬಿಳಿ, ಹಸಿರು ಮೂರು ಬಣ್ಣದ ಸಮಾನಾಂತರ ಪಟ್ಟಿಗಳನ್ನು ಸೇರಿಸಿ ಧ್ವಜ ತಯಾರಿಸಬೇಕು ಎನ್ನುವ ನಿಯಮ ಉಲ್ಲಂಘಿಸಿ, ಬೇಕಾಬಿಟ್ಟಿ ಅಂತರದಲ್ಲಿ ಪಾಲಿಸ್ಟರ್‌ ಬಟ್ಟೆಗೆ ಬಣ್ಣ ಹಾಕಲಾಗಿದೆ. ಧ್ವಜದ ಬಟ್ಟೆಯ ನೂಲಿನ ಎಳೆ ಬಿಟ್ಟಿದೆ, ಅಲ್ಲಲ್ಲಿ ಹರಿದಿದೆ. ಬಿಳಿ ಬಣ್ಣದ ಭಾಗಕ್ಕೆ ಕೇಸರಿ ಬಣ್ಣ ಅಂಟಿಕೊಂಡಿದೆ. ಧ್ವಜದ ಅಂಚಿಗೆ ಹೊಲಿಗೆ ಸಹ ಸರಿಯಾಗಿಲ್ಲ.

ADVERTISEMENT

‘ಬಿಐಎಸ್‌ ಮಾನದಂಡ ಪ್ರಕಾರ 12x18, 24x36 ಇಂಚಿನ ರಾಷ್ಟ್ರಧ್ವಜವನ್ನಷ್ಟೇ ಸಿದ್ಧಪಡಿಸಬೇಕು. ಆದರೆ, 20x30 ಇಂಚಿನ ಪಾಲಿಸ್ಟರ್‌ ಧ್ವಜ ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ. ಇವು ರಾಷ್ಟ್ರಧ್ವಜ ಮಾದರಿಯ ಬ್ಯಾನರ್‌ಗಳೇ ಹೊರತು ರಾಷ್ಟ್ರಧ್ವಜ ಎಂದು ಒಪ್ಪಲು ಸಾಧ್ಯವಿಲ್ಲ’ ಎಂದು ಬೆಂಗೇರಿ ಖಾದಿ ಗ್ರಾಮೋದ್ಯೋಗ ಕೇಂದ್ರ ಕಾರ್ಯದರ್ಶಿ ಶಿವಾನಂದ ಮಠಪತಿ ಹೇಳಿದರು.

ಇಲಾಖೆಗೆ ಮರಳಿಸಿ: ‘ಅಂಚೆ ಇಲಾಖೆಗೆ ಪೂರೈಕೆಯಾದ ಶೇ 10ರಷ್ಟು ಧ್ವಜಗಳು ನ್ಯೂನತೆಯಿಂದ ಕೂಡಿವೆ. ಅವುಗಳನ್ನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ಸಾರ್ವಜನಿಕರು ಅಂತಹ ಧ್ವಜಗಳನ್ನು ಖರೀದಿಸಿದರೆ ಇಲಾಖೆಗೆ ಮರಳಿಸಬೇಕು’ ಎಂದು ಧಾರಾವಾಡ ಜಿಲ್ಲಾಧಿಕಾರಿಗುರುದತ್ತ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.