ADVERTISEMENT

ಆಟೊ ಮೀಟರ್‌ಗೆ 5 ದಿನ ಕಾಯಬೇಕು

ಹುಬ್ಬಳ್ಳಿ– ಧಾರವಾಡದಲ್ಲಿ ಐದು ಕಡೆ ಮಾತ್ರ ಸತ್ಯಾಪನಾ ಕೇಂದ್ರ

ಎಂ.ನವೀನ್ ಕುಮಾರ್
Published 22 ಜನವರಿ 2019, 14:13 IST
Last Updated 22 ಜನವರಿ 2019, 14:13 IST
ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಆಟೊ ರಿಕ್ಷಾಗೆ ಮೀಟರ್ ಅಳವಡಿಸಲಾಯಿತು– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ಆಟೊ ರಿಕ್ಷಾಗೆ ಮೀಟರ್ ಅಳವಡಿಸಲಾಯಿತು– ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಅವಳಿ ನಗರದಲ್ಲಿ ಕೇವಲ ಐದು ಕಡೆ ಮಾತ್ರ ಆಟೊ ರಿಕ್ಷಾ ಮೀಟರ್ ಸತ್ಯಾಪನೆ (ಕ್ಯಾಲಿಬ್ರೇಷನ್) ಮಾಡುತ್ತಿರುವುದರಿಂದ ಪ್ರಕ್ರಿಯೆ ವಿಳಂಬವಾಗುತ್ತಿದೆ.

ಹುಬ್ಬಳ್ಳಿ– ಧಾರವಾಡ ನಗರದಲ್ಲಿ ಅಂದಾಜು 18,000 ಆಟೊ ರಿಕ್ಷಾಗಳಿವೆ. ಇತ್ತೀಚೆಗಷ್ಟೇ ಖರೀದಿಸಿದ ವಾಹನಗಳನ್ನು ಹೊರತುಪಡಿಸಿ ಉಳಿದವುಗಳು ಮೀಟರ್ ಸತ್ಯಾಪನೆ ಮಾಡಿಸಿಕೊಳ್ಳಲೇಬೇಕಾಗಿದೆ. ಪೊಲೀಸರು ಮೀಟರ್ ಇಲ್ಲದ ಆಟೊಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರುವುದರಿಂದ, ಎಲ್ಲರೂ ಒಮ್ಮೆಲೆ ಈ ಕೇಂದ್ರಗಳತ್ತ ಮುಗಿಬೀಳುತ್ತಿದ್ದಾರೆ. ಒತ್ತಡ ಹೆಚ್ಚಾಗಿರುವುದರಿಂದ ಒಂದೆರಡು ದಿನಗಳಲ್ಲಿ ಮೀಟರ್ ವಾಪಸ್ ನೀಡಲು ಸಾಧ್ಯವಾಗುತ್ತಿಲ್ಲ, ಕನಿಷ್ಠ ಐದು ದಿನ ಕಾಯಬೇಕಾಗಿದೆ.

‘ಸತ್ಯಾಪನೆಗೆ ನೀಡಿದ್ದ ಮೀಟರ್ ಅನ್ನು ಒಂದು ವಾರದ ನಂತರ ಮರಳಿ ನೀಡಿದರು. ಅದರ ಮಧ್ಯೆಯೇ ಪೊಲೀಸರು ₹300 ದಂಡ ವಿಧಿಸಿದರು. ಸತ್ಯಾಪನೆಗೆ ₹600 ಖರ್ಚು ಮಾಡಿ, ಅದರ ಮೇಲೆ ದಂಡ ಸಹ ಪಾವತಿಸಬೇಕಾಯಿತು. ಈ ರೀತಿ ಮಾಡುವುದರಿಂದ ಪ್ರತಿ ದಿನ 300–400 ರೂಪಾಯಿ ದುಡಿದು ಬದುಕುವ ನಮ್ಮಂತಹ ಚಾಲಕರು ತೀವ್ರ ತೊಂದರೆ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಆಟೊ ಚಾಲಕ ಗುರುಸಿದ್ದಪ್ಪ.

ADVERTISEMENT

‘ಸತ್ಯಾಪನಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿ ಒಂದೇ ದಿನದಲ್ಲಿ ಮೀಟರ್ ಸಿಗುವಂತಾದರೆ ಅನುಕೂಲವಾಗಲಿದೆ. ಇಲ್ಲವಾದರೆ ಸಂಚಾರ ಪೊಲೀಸರು ಸ್ವಲ್ಪ ರಿಯಾಯಿತಿ ತೋರಬೇಕು’ ಎಂದು ಅವರು ಹೇಳುತ್ತಾರೆ.

‘ಎಲೆಕ್ಟ್ರಾನಿಕ್ಸ್‌ ಡಿಪ್ಲೋಮಾ, ಬಿ.ಇ ಪದವೀಧರರು ಸತ್ಯಾಪನಾ ಸೇವಾಧಾರರಾಗಬಹುದು. ಅರ್ಜಿ ಹಾಕಿದ ಐದು ಮಂದಿ ಸ್ಥಳೀಯರನ್ನು ಆಯ್ಕೆ ಮಾಡಲಾಗಿದೆ. ಮೀಟರ್‌ನಲ್ಲಿ ಏನಾದರೂ ದೋಷ ಕಾಣಿಸಿಕೊಂಡರೆ ಕೂಡಲೇ ಸಂಪರ್ಕಿಸಬೇಕಾಗುತ್ತದೆ, ಆದ್ದರಿಂದ ಸ್ಥಳೀಯರೇ ಸೂಕ್ತ. ಹೊರಗಿನವರಿಗೆ ಅವಕಾಶ ನೀಡಿದರೆ ಸಮಸ್ಯೆಯಾಗಬಹುದು ಎಂಬ ಕಾರಣಕ್ಕೆ ನೀಡಿಲ್ಲ. ಸತ್ಯಾಪನೆ ದರ ನಿಗದಿಯನ್ನು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯೇ ಮಾಡಿದೆ’ ಎನ್ನುತ್ತಾರೆ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಪಿ.ಸಿ. ಅರ್ಜುನಗಿ.

‘ಕೇವಲ ಮೀಟರ್ ಅನ್ನು ಸೆಟ್ ಮಾಡುವುದಾದರೆ ಎರಡು ದಿನಗಳಲ್ಲಿ ಕೆಲಸ ಆಗುತ್ತದೆ. ಅದಕ್ಕೆ ಸೀಲ್ ಮಾಡಿಸಬೇಕು ಎಂದರೆ ಮತ್ತೆ ಇನ್ನೆರಡು ದಿನ ಬೇಕಾಗುತ್ತದೆ. ನಾವಂತೂ ಆದಷ್ಟು ಬೇಗ ಮೀಟರ್ ಸೆಟ್ ಮಾಡಿಕೊಡುತ್ತಿದ್ದೇವೆ’ ಎನ್ನುತ್ತಾರೆ ಸತ್ಯಾಪನೆ ಮಾಡುತ್ತಿರುವ ಕಮರಿಪೇಟೆಯ ಮಹಾಲಕ್ಷ್ಮಿ ಎಲೆಕ್ಟ್ರಾನಿಕ್ಸ್‌ನ ಬಾಬು.

‘ಈಗಿನ ಸ್ಥಿತಿಯನ್ನು ಅವಲೋಕಿಸಿ ಮೀಟರ್ ಅನ್ನು ರೀ ಸೆಟ್ ಮಾಡಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶ ನೀಡಲಿ. ಆ ನಂತರ ಮೀಟರ್ ಇಲ್ಲದವರ ವಿರುದ್ಧ ಪ್ರಕರಣ ದಾಖಲಿಸಲಿ’ ಎಂದು ಮನವಿ ಮಾಡುತ್ತಾರೆ ಆಟೊ ಚಾಲಕ ಮಹಾಂತೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.