ADVERTISEMENT

ನವಲಗುಂದ | ಸ್ಮಶಾನ ರಸ್ತೆಗೆ ಆಗ್ರಹ; ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:53 IST
Last Updated 31 ಆಗಸ್ಟ್ 2025, 4:53 IST
<div class="paragraphs"><p>ನವಲಗುಂದ ತಾಲ್ಲೂಕಿನ ಸೊಟಕನಾಳ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ತೆರಳಲು ಸ್ಮಶಾನ ರಸ್ತೆ ಇಲ್ಲದ್ದನ್ನು ಖಂಡಿಸಿ ಗ್ರಾಮಸ್ಥರು ಬಸ್ ನಿಲ್ದಾಣದ ಹತ್ತಿರ ಟ್ರಾಕ್ಟರ್ ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು</p></div>

ನವಲಗುಂದ ತಾಲ್ಲೂಕಿನ ಸೊಟಕನಾಳ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ತೆರಳಲು ಸ್ಮಶಾನ ರಸ್ತೆ ಇಲ್ಲದ್ದನ್ನು ಖಂಡಿಸಿ ಗ್ರಾಮಸ್ಥರು ಬಸ್ ನಿಲ್ದಾಣದ ಹತ್ತಿರ ಟ್ರಾಕ್ಟರ್ ನಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು

   

ನವಲಗುಂದ: ಸ್ಮಶಾನಕ್ಕೆ ತೆರಳಲು ಸಮರ್ಪಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ತಾಲ್ಲೂಕಿನ ಸೊಟಕನಾಳ ಗ್ರಾಮದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು. 

ಸ್ಮಶಾನಕ್ಕೆ ತೆರಳಲು ರಸ್ತೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ನಿರ್ಲಕ್ಷ್ಯ ಧೋರಣೆಯಿಂದಾಗಿ ಬೇಸತ್ತ ಗ್ರಾಮಸ್ಥರು ಶನಿವಾರ ನಿಧನರಾದ ಮಲ್ಲವ್ವ ಹನಮಂತಪ್ಪ ಆನಂದಿ ಅವರ ಶವವನ್ನು ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇಟ್ಟು ಪ್ರತಿಭಟನೆ ನಡೆಸಿದರು.  

ADVERTISEMENT

ನವಲಗುಂದ ಪೊಲೀಸ್ ಠಾಣಿಯ ಎಸ್‍ಐ ಜನಾರ್ಧನ ಭಟ್ರಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು. ನಂತರ ತಹಶೀಲ್ದಾರ್ ಸುಧೀರ ಸಾಹುಕಾರ ಬಂದು ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿ ಖಾಸಗಿ ಜಮೀನುಗಳಿದ್ದು ಆ ಜಮೀನು ಮಾಲೀಕರೊಂದಿಗೆ ಚರ್ಚಿಸಿ  ಶೀಘ್ರದಲ್ಲಿಯೇ ರಸ್ತೆ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು. ಅವರ ಭರವಸೆ ಮೇರೆಗೆ ಗ್ರಾಮಸ್ಥರು ಮಲ್ಲವ್ವ ಆನಂದಿ ಅವರ ಅಂತ್ಯಕ್ರಿಯೆ ನೆರವೇರಿಸಿದರು. 

‘ಹಲವು ವರ್ಷಗಳಿಂದ ಗ್ರಾಮದಲ್ಲಿ ಸ್ಮಶಾನವೇ ಇರಲಿಲ್ಲ. ಸ್ಮಶಾನ ನಿರ್ಮಿಸಲು ಇತ್ತೀಚೆಗೆ ಸರ್ಕಾರ 10 ಗುಂಟೆ ಜಾಗ ನೀಡಿದೆ. ಆದರೆ ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲ. ಅಕ್ಕಪಕ್ಕದ ಖಾಸಗಿ ಜಮೀನಿನ ಮಾಲೀಕರು ಸ್ಮಶಾನಕ್ಕೆ ತೆರಳುವವರಿಗೆ ತಡೆಯೊಡ್ಡುತ್ತಿದ್ದಾರೆ.  ಅದಕ್ಕಾಗಿ ರಸ್ತೆ ನಿರ್ಮಿಸಿಕೊಡುವಂತೆ ಆಗ್ರಹಿಸಲು ಅನಿವಾರ್ಯವಾಗಿ ಶವ ಇಟ್ಟು ಪ್ರತಿಭಟಿಸಬೇಕಾಯಿತು’ ಎಂದು ಸೊಟಕನಾಳ ಗ್ರಾಮಸ್ಥ ವೀರನಗೌಡ ಹಿರೇಗೌಡರ ಹೇಳಿದರು.

ಡಿವೈಎಸ್ಪಿಗಳಾದ ಮಹಾಂತೇಶ ಕಟಗಿ, ಮುಕ್ತೇದಾರ, ಸಿಪಿಐ ರವಿ ಕಪ್ಪತ್ತನವ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.